ರೇವಣ್ಣ-ದಿನೇಶ್ ಗುಂಡೂರಾವ್ ನಡುವೆ ಮಾತಿನ ಸಮರ
ಬೆಂಗಳೂರು, ಜನವರಿ 04: ಮೈತ್ರಿ ಸರ್ಕಾರದ ಇಬ್ಬರು ಪವರ್‌ಫುಲ್ ಮುಖಂಡರು ಪರಸ್ಪರ ಮಾತಿನ ಸಮರದಲ್ಲಿ ನಿರತರಾಗಿದ್ದಾರೆ.
ಸಚಿವ ಎಚ್.ಡಿ.ರೇವಣ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರುಗಳು ನಿನ್ನೆಯಿಂದಲೂ ಪರಸ್ಪರ ರಾಜಕೀಯ
ನಿಂದನೆಯಲ್ಲಿ ತೊಡಗಿದ್ದಾರೆ.
ನಿಗಮ ಮಂಡಳಿ ಬಗ್ಗೆ ಹೇಳಿಕೆ ನೀಡಿದ್ದ ದಿನೇಶ್ ಗುಂಡೂರಾವ್ ಅವರು, ಮೈತ್ರಿ ಧರ್ಮದ ಪ್ರಕಾರವೇ ನಡೆದುಕೊಳ್ಳಲಾಗಿದೆ. ರೇವಣ್ಣ ಅವರು ತಮ್ಮ ಇಲಾಖೆಯ ಬಗ್ಗೆ ಗಮನ ವಹಿಸಲಿ ಸಾಕು ಎಂದು ಹೇಳಿದ್ದರು.

ರೇವಣ್ಣ ಅವರು ನಿಗಮ ಮಂಡಳಿ ಬಗ್ಗೆ ಹಾಗೂ ಪರಮೇಶ್ವರ್ ಅವರಿಂದ ಸಚಿವ ಸ್ಥಾನ ಕಸಿದುಕೊಂಡ ಬಗ್ಗೆ ಮಾತನಾಡಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ್ದ ದಿನೇಶ್ ಗುಂಡೂರಾವ್ ಅವರು, ರೇವಣ್ಣ ಜೆಡಿಎಸ್ ನೋಡಿಕೊಂಡರೆ ಸಾಕು ಎಂದಿದ್ದರು.
ದಿನೇಶ್ ಗುಂಡೂರಾವ್ ಅವರ ಮಾತು ರೇವಣ್ಣ ಅವರನ್ನು ಕೆರಳಿಸಿದೆ, ನನಗೆ ಹೇಳಲು ದೇವೇಗೌಡ ಹಾಗೂ ಕುಮಾರಸ್ವಾಮಿ ಇದ್ದಾರೆ. ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ಅನ್ನು ನೋಡಿಕೊಳ್ಳಲಿ, ಅವರ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲಿ ಸಾಕು ಎಂದು ಅವರು ಹೇಳಿದರು.
ನಾನು ಐದು ಬಾರಿ ಚುನಾವಣೆ ಗೆದ್ದು ಶಾಸಕನಾಗಿ ಆಯ್ಕೆ ಬಂದಿದ್ದೇನೆ, ನನಗೆ ದಿನೇಶ್ ಗುಂಡೂರಾವ್ ಹೇಳಿಕೊಡಬೇಕಿಲ್ಲ ಎಂದು ರೇವಣ್ಣ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications