NDA Government: ಕೃಷಿ ಖಾತೆ ಮೇಲೆ ಕಣ್ಣಿಟ್ಟಿರುವ ಎಚ್‌ಡಿ ಕುಮಾರಸ್ವಾಮಿ
ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆದಿದ್ದು ಸರ್ಕಾರ ರಚನೆಗೆ ತಯಾರಿ ಆರಂಭಿಸಿದೆ. ಬುಧವಾರ ನಡೆದ ಎನ್‌ಡಿಎ ಸಭೆಯಲ್ಲಿ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಮಾಡಲು ಎಲ್ಲ ನಾಯಕರೂ ಒಪ್ಪಿಗೆ ಸೂಚಿಸಿದ್ದಾರೆ.
ಜೂನ್ 8ರಂದು ಶನಿವಾರ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿಗೆ ಬೆಂಬಲ ಕೊಟ್ಟಿರುವ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದೆ. ಜೆಡಿಎಸ್ 2 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿದೆ.
ಮಂಡ್ಯದಿಂದ ಸ್ಫರ್ಧೆ ಮಾಡಿ ಭರ್ಜರಿ ಗೆಲುವು ಸಾಧಿಸಿರುವ ಎಚ್‌ಡಿ ಕುಮಾರಸ್ವಾಮಿ ಇಂದು ನಡೆದ ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದ್ದರು. ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವ ಸ್ಥಾನ ಪಡೆಯಲು ಕುಮಾರಸ್ವಾಮಿ ಆಸಕ್ತಿ ಹೊಂದಿದ್ದಾರೆ.
ಕೃಷಿ ಖಾತೆ ಮೇಲೆ ಕಣ್ಣು
ದೆಹಲಿಯಲ್ಲಿ ಎನ್‌ಡಿಎ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ, "ನಮ್ಮಿಂದ ಯಾವುದೇ ಬೇಡಿಕೆಗಳು ಇಲ್ಲ, ಹಲವು ವರ್ಷಗಳಿಂದ ಕರ್ನಾಟಕ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ. ಕರ್ನಾಟಕ ರಾಜ್ಯಕ್ಕೆ ಕ್ಯಾಬಿನೆಟ್ ಸ್ಥಾನ ನೀಡುವ ಬಗ್ಗೆ ನರೇಂದ್ರ ಮೋದಿ ನಿರ್ಧಾರ ಮಾಡುತ್ತಾರೆ" ಎಂದು ಹೇಳಿದ್ದಾರೆ.
ಕೃಷಿ ಸಚಿವರಾಗುತ್ತಾರೆ ಎನ್ನುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದ ಹಲವು ನಾಯಕರು ಇದೇ ಆಸೆ ಇಟ್ಟುಕೊಂಡಿದ್ದಾರೆ. ಆದರೆ ಎನ್‌ಡಿಎ ಏನು ನಿರ್ಧಾರ ಮಾಡುತ್ತದೆ ಕಾದು ನೋಡೋಣ ಎಂದು ಹೇಳುವ ಮೂಲಕ ಪರೋಕ್ಷವಾಗಿ ತನಗೆ ಕೃಷಿ ಸಚಿವನಾಗುವ ಆಸಕ್ತಿ ಇದೆ ಎಂದು ಸೂಚನೆ ಕೊಟ್ಟಿದ್ದಾರೆ.
ನಮ್ಮ ಕುಟುಂಬ ಮೊದಲಿನಿಂದ ರೈತ ಸಮುದಾಯದ ಅಭಿವೃದ್ಧಿಗೆ ಹೋರಾಡಿದೆ. ಕೃಷಿ ಸಮಸ್ಯೆಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವ ಎಚ್‌ಡಿಕೆ ಅವರಿಗೆ ಕೃಷಿ ಖಾತೆ ಕೊಡಬೇಕು ಎಂದು ಜೆಡಿಎಸ್ ಬೆಂಬಲಿಗರು ಕೂಡ ಆಗ್ರಹಿಸಿದ್ದಾರೆ.












Click it and Unblock the Notifications