ಮತ್ತೊಮ್ಮೆ ಸಿದ್ದರಾಮಯ್ಯ ಕೂಗಿಗೆ ತಡೆ ಹಾಕಲು ಗೌಡರು ಅಖಾಡಕ್ಕೆ!
Recommended Video
ಬೆಂಗಳೂರು, ಮೇ 09 : ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೆಚ್ಚುತ್ತಿದೆ. ಇದರಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ. ಆದ್ದರಿಂದ, ದೇವೇಗೌಡರು ಅಖಾಡಕ್ಕೆ ಇಳಿದಿದ್ದಾರೆ.
ಗೃಹ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಈ ಹೇಳಿಕೆಯಿಂದಾಗಿ ಬೇಸರಗೊಂಡಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಜನರ ಆಶೀರ್ವಾದ ಇದ್ದರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬಹುದು. ಇದರಲ್ಲಿ ತಪ್ಪೇನಿದೆ ಹೇಳಿ?. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕೆಲವರು ಆಸೆ ಪಟ್ಟಿರಬಹುದು' ಎಂದದರು.
ಈಗ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಶಾಸಕರನ್ನು ಸುಮ್ಮನಿರಿಸಲು ಅಖಾಡಕ್ಕೆ ಇಳಿದಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಈ ಕುರಿತು ದೇವೇಗೌಡರು ಮಾತನಾಡುವ ಸಾಧ್ಯತೆ ಇದೆ. ದೇವೇಗೌಡರ ತಂತ್ರ ಫಲ ನೀಡಿದರೆ ಸಿದ್ದರಾಮಯ್ಯ ಬೆಂಬಲಿಗರಿಗೆ ನಿರಾಸೆಯಾಗಬಹುದು.....

ಸರ್ಕಾರವನ್ನು ಉಳಿಸಬೇಕು
ಕರ್ನಾಟಕದ ಮೈತ್ರಿ ಸರ್ಕಾರವನ್ನು ಉಳಿಸಬೇಕು ಎಂಬುದು ದೇವೇಗೌಡರ ಪಣ. ಸರ್ಕಾರ ಸುಭದ್ರವಾಗಿರಬೇಕಾದರೆ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬೆಂಬಲಿಸುವುದನ್ನು ಬಿಡಬೇಕು. ಅದಕ್ಕಾಗಿ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಿಂದ ದೂರಾಗಬೇಕು ಎಂಬುದು ದೇವೇಗೌಡರ ತಂತ್ರವಾಗಿದೆ.

ರಾಜ್ಯಪಾಲ ಅಥವ ರಾಷ್ಟ್ರ ರಾಜಕಾರಣ
ಸಿದ್ದರಾಮಯ್ಯ ಅವರನ್ನು ರಾಜ್ಯಪಾಲರನ್ನಾಗಿ ಮಾಡುವುದು ಅಥವ ರಾಷ್ಟ್ರ ರಾಜಕಾರಣಕ್ಕೆ ಕಳಿಸಿದರೆ ರಾಜ್ಯದಲ್ಲಿ ಅವರ ಬೆಂಬಲಿಗರು ಮೌನವಾಗುತ್ತಾರೆ. ಆಗ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಆದರೆ, ಇದಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಥವ ರಾಹುಲ್ ಗಾಂಧಿ ಅವರು ಒಪ್ಪಿಗೆ ನೀಡಬೇಕು.

ರಾಹುಲ್ ಗಾಂಧಿ ಜೊತೆ ಮಾತುಕತೆ
ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶದ ಬಳಿಕ ತಮ್ಮ ದಾಳ ಉರುಳಿಸಲು ದೇವೇಗೌಡರು ಬಯಸಿದ್ದಾರೆ. ಅದರಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ರಾಹುಲ್ ಕರೆಸಿಕೊಳ್ಳಲಿದ್ದಾರೆಯೇ? ಕಾದು ನೋಡಬೇಕು.
|
ಮತ್ತೆ ಸಿಎಂ ಆಗಬೇಕು ಎಂಬ ಹೇಳಿಕೆ
ಕಾಂಗ್ರೆಸ್ ಶಾಸಕರ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ಅಷ್ಟು ಸಮಂಜಸವಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಬೇಸರ
ಬುಧವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕರ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರದ ಬಗ್ಗೆ ಯಾವ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ನಿಮ್ಮ ಶಾಸಕರಿಗೆ ಹೇಳಿ ಎಂದು ಉಭಯ ನಾಯಕರಿಗೆ ಸೂಚಿಸಿದ್ದಾರೆ ಎಂಬುದು ಗೃಹ ಕಚೇರಿ ಕೃಷ್ಣಾದಿಂದ ಬಂದಿರುವ ಸುದ್ದಿ.












Click it and Unblock the Notifications