ಸಂಚಾರಿ ಪೊಲೀಸರ ವಿರುದ್ಧ ಸ್ಟಿಂಗ್ ಆಪರೇಷನ್‌ಗೆ ಹೈಕೋರ್ಟ್ ಅನುಮತಿ!
ಬೆಂಗಳೂರು, ನವೆಂಬರ್ 05; ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ ಕುಟುಕು ಕಾರ್ಯಾಚರಣೆ (Sting Operation)ಗೆ ಕರ್ನಾಟಕ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಅಲ್ಲದೆ, ಬ್ರಾಡ್‌ಕಾಸ್ಟಿಂಗ್ ಸ್ಟಾಂಡರ್ಡ್ ಅಥಾರಿಟಿ (ಬಿಎಸ್‌ಎ), ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯಿದೆಯ ಕುಟುಕು ಕಾರ್ಯಾಚರಣೆಗಳು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆದೇಶ ನೀಡಿದೆ. ಜತೆಗೆ ಸಂಚಾರಿ ಪೊಲೀಸರ ವಿರುದ್ಧದ ಸ್ಟಿಂಗ್ ಆಪರೇಷನ್ ಅನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.
ಬೆಂಗಳೂರಿನ ಈಶಾನ್ಯ ವಲಯದ ಸಂಚಾರ ವಿಭಾಗದ ಎಸಿಪಿ ಎಂ. ಎಸ್. ಅಶೋಕ್ ಮತ್ತಿತರ ಹಲವು ಅಧಿಕಾರಿಗಳು ಅಧೀನ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಆದರೆ ಇದೇ ಪ್ರಕರಣದ ಸಂಬಂಧ ವಾಣಿಜ್ಯ ಇಲಾಖೆ ಅಧಿಕಾರಿಗಳ ವಿರುದ್ಧದ ಕೇಸ್ ಅನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಹೈಕೋರ್ಟ್ ಆದೇಶವೇನು?; ಬೆಂಗಳೂರು ಪ್ರವೇಶಿಸಲು ಗ್ರಾನೈಟ್ ಲಾರಿಗಳಿಂದ ಲಂಚ ಸ್ವೀಕರಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರ ಮೇಲಿನ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಕುಟುಕು ಕಾರಾರಯಚರಣೆ ಮಾಡುವಾಗ ನಿಯಮದಂತೆ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಪಾದಕರ ತಂಡದ ಮುಖ್ಯಸ್ಥರ ಪೂರ್ವಾನುಮತಿ ಪಡೆದಿರಬೇಕು. ಸಾರ್ವಜನಿಕ ಹಿತಾಸಕ್ತಿ, ತಪ್ಪು ಬಯಲುಗೊಳಿಸುವ ಉದ್ದೇಶ ಹೊಂದಿರಬೇಕೆಂದು ಸೂಚಿಸಿದೆ.
ಆದರೆ ಅದರಿಂದ ವ್ಯಕ್ತಿಯ ಖಾಸಗಿ ಜೀವನಕ್ಕೆ ತೊಂದರೆ ಆಗುವಂತಿರಬಾರದು. ಲಂಚ ಸ್ವೀಕರಿಸುವಂತೆ ಆಮಿಷ ಒಡ್ಡುವಂತಿರಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟು ಸ್ವೀಕರಿಸಿರುವ ದೃಶ್ಯಗಳಿವೆ. ಹಾಗಾಗಿ ಸಂಚಾರಿ ಪೊಲೀಸರ ವಿರುದ್ಧದ ಕುಟುಕು ಕಾರ್ಯಾಚರಣೆ ಎತ್ತಿ ಹಿಡಿಯಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಆದರೆ ವಾಣಿಜ್ಯ ತೆರಿಗೆ ಅಧಿಕಾರಿಗಳೂ ಸಹ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ವಿಚಾರ ಸಾಬೀತಾಗದ ಹಿನ್ನೆಲೆಯಲ್ಲಿಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಆಧರಿಸಿ ದಾಖಲಿಸಿದ್ದ ಪ್ರಕರಣವನ್ನೂ ನ್ಯಾಯಾಲಯ ರದ್ದುಗೊಳಿಸಿದೆ.
ಬೆಂಗಳೂರಿನಲ್ಲಿ ಅಧಿಕ ವಾಹನದಟ್ಟಣೆ: ಬೆಂಗಳೂರು ಮಹಾ ನಗರದಲ್ಲಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ, ಬೆಂಗಳೂರು ವಾಹನ ಸಂಚಾರ ದಟ್ಟಣೆಯಲ್ಲಿ ಲಂಡನ್ ನಗರಕ್ಕೆ ಸಮೀಪದಲ್ಲಿದೆ. ಬೆಂಗಳೂರು ಎರಡನೇ ಅತಿಹೆಚ್ಚು ದಟ್ಟಣೆಯ ನಗರಿ ಎಂದು ಹೆಸರಾಗಿದೆ ಎಂದು ಹೇಳಿದೆ. ಆದರೂ ಸಹ ಸಂಚಾರಿ ಪೊಲೀಸರು ಲಂಚ ಸ್ವೀಕರಿಸಿ ನಿರ್ಬಂಧಿತ ಅವಧಿಯಲ್ಲಿಯೂ ಲಾರಿಗಳನ್ನು ನಗರದೊಳಕ್ಕೆ ಬಿಡಲಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಮತ್ತೊಂದೆಡೆ ನಗರದಲ್ಲಿಅಪರಾಧ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ ಎಂದು ಹೇಳಿರುವ ನ್ಯಾಯಾಲಯ, ಸರ್ಕಾರ ಈ ಸಂಚಾರ ಪೊಲೀಸರ ಭ್ರಷ್ಟಾಚಾರವನ್ನು ಕಠಿಣ ರೀತಿಯಲ್ಲಿ ಹತ್ತಿಕ್ಕಬೇಕು ಮತ್ತು ಇದರಿಂದ ನಾಗರಿಕರು ಮತ್ತು ಆರ್ಥಿಕತೆ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಆದೇಶದಲ್ಲಿ ತಿಳಿಸಿದೆ.












Click it and Unblock the Notifications