ಮಹಿಳೆಯನ್ನು ಚುಡಾಯಿಸಿದ್ದವನಿಗೆ ಮೂರು ವರ್ಷ ಜೈಲು
ಬೆಂಗಳೂರು, ಮೇ 18: ಮಹಿಳೆಯೊಬ್ಬರನ್ನು ಚುಡಾಯಿಸಿ, ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 3 ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ. ಮಂಡ್ಯ ಜಿಲ್ಲೆಯ ಬೆಸ್ತರಕೊಪ್ಪಲು ಗ್ರಾಮದ ಎಚ್. ಸಿ. ಚಿಕ್ಕರಾಜು ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ.
ವಿಚಾರಣಾ ನ್ಯಾಯಾಲದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ ಟಿ. ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಆರೋಪಿ ಮಹಿಳೆಯ ಸೀರೆಯನ್ನು ಎಳೆದಿದ್ದು, ಆಕೆಯನ್ನು ಬೆತ್ತಲೆಗೊಳಿಸಲು ಪ್ರಯತ್ನಿಸಿರುವುದು, ಪ್ರಾಣ ಬೆದರಿಕೆ ಹಾಕಿರುವುದು, ದೊಣ್ಣೆಯಿಂದ ಗಾಯಗೊಳಿಸಿರುವುದು, ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿರುವ ಅಂಶಗಳು ಸಾಕ್ಷ್ಯಾಧಾರಗಳಿಂದ ದೃಢ ಪಟ್ಟಿದೆ. ಹೀಗಿರುವಾಗ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯಲ್ಲಿ ಯಾವುದೇ ದೋಷ ಕಂಡು ಬರುತ್ತಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯ ನಂಜೇಗೌಡದನ ಕೊಪ್ಪಲು ಗ್ರಾಮದ ನಿವಾಸಿಯಾದ ವಿವಾಹಿತ ಮಹಿಳೆಗೆ ಆರೋಪಿ ಬೆಸ್ತರ ಕೊಪ್ಪಲು ನಿವಾಸಿಯಾದ ಕೆ. ಸಿ. ಸಿಕ್ಕರಾಜು ಎಂಬುವರು ವಿನಾಕಾರಣ ಕಿರುಕುಳ ನೀಡುವುದು, ಅವರು ಎಲ್ಲಿ ಹೋದರೂ ಹಿಂದೆ ಹೋಗುವುದು, ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು.
ದೂರುದಾರ ಮಹಿಳೆ ಕೆಲ ದಿನಗಳ ಬಳಿಕ ವಿಷಯವನ್ನು ಪತಿಯ ಗಮನಕ್ಕೆ ತಂದಿದ್ದು, 2013ರ ಆಗಸ್ಟ್ 23ರಂದು ದೂರುದಾರ ಮಹಿಳೆ ಮತ್ತು ಆಕೆಯ ಪತಿ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆರೋಪಿ ಬಂದಿದ್ದ.
ಈ ವೆಳೆ ಮಹಿಳೆಯ ಪತಿ ಆರೋಪಿಯ ನಡೆಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಾದ ಆರೋಪಿ ತಕ್ಷಣ ಮಹಿಳೆ ಮತ್ತವರ ಗಂಡನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಪತ್ನಿಯನ್ನು ಚುಡಾಯಿಸುತ್ತೇನೆ ಏನು ಮಾಡುತ್ತೀಯಾ? ಎಂದು ಪ್ರಶ್ನೆ ಮಾಡುತ್ತಾರೆ.
ಅಲ್ಲದೆ, ದೊಣ್ಣೆಯಿಂದ ಹೊಡೆದು ಎದೆಭಾಗ ಮತ್ತು ಮೊಣಕಾಲಿನ ಮೇಲೆ ಹೊಡೆದು ಗಾಯಗೊಳಿಸಿರುತ್ತಾನೆ. ಪತಿಯ ರಕ್ಷಣೆಗೆ ಬಂದ ಮಹಿಳೆಯ ಸೀರೆಯನ್ನು ಎಳೆದಾಡಿ, ಹಲ್ಲೆ ನಡೆಸಿ, ಗಂಡನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ವಿರುದ್ಧ ತನಿಖೆ ನಡೆಸಿ ಐಪಿಸಿಯ ವಿವಿಧ ಕಾಲಂಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ವಿಚಾರಣೆ ನಡೆಸಿದ್ದ ಜೆಎಂಎಫ್‌ಸಿ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಪರಿಸೀಲಿಸಿ 3 ವರ್ಷಗಳ ಕಾಲ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ಆದೇಶಿಸಿತ್ತು. ಇದನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದನು.












Click it and Unblock the Notifications