ಹಾವೇರಿ ದುರಂತ: ಅಪಘಾತಕ್ಕೆ ಸಿದ್ಧವಾಗಿಯೇ ಇದ್ದೆವು

ಮುಂಬೈನ ಇಸ್ಮಾಯಿಲ್ ಅವರ ಪ್ರಕರಣವನ್ನೇ ತೆಗೆದುಕೊಂಡರೆ... ಮುಂಬೈಗೆ ತೆರಳುವ ಆಲೋಚನೆಯಲ್ಲಿದ್ದ ಇಸ್ಮಾಯಿಲ್ ಗೆ ಬೆಂಗಳೂರಿನಲ್ಲಿ ಬಸ್ಸೇರುತ್ತಿದ್ದಂತೆ ಮೊದಲು ನೆನಪಿಗೆ ಬಂದಿದ್ದು ಜಬ್ಬಾರ್ ಬಸ್ ಅಗ್ನಿ ದುರಂತ. ಅದು ನೆನಪಿಗೆ ಬರುತ್ತಿದ್ದಂತೆ ಒಮ್ಮೆ ಬೆಚ್ಚಿಬಿದ್ದ ಇಸ್ಮಾಯಿಲ್ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ
ಅಕಸ್ಮಾತ್ ತಾನು ಸಂಚರಿಸುತ್ತಿರುವ ಬಸ್ಸಿಗೂ ಬೆಂಕಿ ಬಿದ್ದರೆ ಅಥವಾ ಬೇರೆ ಇನ್ನೇದಾರೂ ಅನಾಹುತವಾದರೆ ಪಾರಾಗಲು ಸುರಕ್ಷತಾ ಕ್ರಮಗಳು ಹೇಗಿವೆ ಎಂಬುದರತ್ತ ಮೊದಲು ಕಣ್ಣಾಡಿಸಿದ್ದರು. ಆಗ ತಮ್ಮ ಕೈಗೆಟುಕುವ ಜಾಗದಲ್ಲಿ ಕಿಟಕಿ ಬಳಿಯಿದ್ದ ಹ್ಯಾಮರ್ ಅವರ ಕಣ್ಣಿಗೆ ಬಿದ್ದಿತ್ತು. ಅದನ್ನು ಹಾಗೇ ತಮ್ಮ ಸ್ಮೃತಿಪಟಲದಲ್ಲಿ ಕ್ಲಿಕ್ಕಿಸಿಕೊಂಡಿದ್ದರು.
ಜತೆಗೆ ಇನ್ನೂ ಸ್ವಲ್ಪ ಆ ಕಡೆ ಈ ಕಡೆ ಕಣ್ಣಾಡಿಸಿ, ಮೈನ್ ಡೋರ್ ಎಷ್ಟು ಹೆಜ್ಜೆಗಳ ಅಂತರದಲ್ಲಿದೆ ಎಂಬುದನ್ನು ಕಣ್ಣಳತೆಯಲ್ಲೇ ನೋಡಿಕೊಂಡಿದ್ದರು. ಇದರ ಹೊರತಾಗಿಯೂ 'ಎಲ್ಲಾ ಆ ಅಲ್ಲಾನೇ ನೋಡಿಕೊಳ್ಳುತ್ತಾನೆ ಬಿಡು' ಎಂದೂ ದೇವರ ಮೇಲೆ ಭಾರ ಹಾಕಿ, ದೀರ್ಘ ಉಸಿರೆಳೆದು ಸೀಟಿಗೆ ಒರಗಿಕೊಂಡರು.
ಆದರೂ ನಿದ್ದೆ ಮಾಡುವ ಧೈರ್ಯ ಬರಲಿಲ್ಲ ಇಸ್ಮಾಯಿಲ್ ಗೆ. ಪಕ್ಕದ ಸೀಟಿನಲ್ಲಿದ್ದ ಗೆಳೆಯನ ಜತೆ (ಸೀಟ್ ನಂಬರ್ 8, 9) ಅದೂ ಇದೂ ಮಾತನಾಡುತ್ತಲೇ ಪ್ರಯಾಣ ಮುಂದುವರಿಸಿದ್ದರು. ಹಾವೇರಿ ದಾಟಿದ ಮೇಲೆ ಛಾಯ್ ಕುಡಿಯಲು ಬಸ್ಸ್ ನಿಲ್ಲಿಸಿದಾಗ, ಒಂದು ಗುಟುಕು ಚಹಾ ಹೀರಿದ ನಂತರ ಒಂದು ಗುಕ್ಕು ಮಲಗಿದರಾಯ್ತು ಅಂದುಕೊಂಡು ಜಾಗೃತರಾಗಿಯೇ ಇದ್ದರು.
ಸರಿಯಾಗಿ ಆಗಲೇ (ನಿರೀಕ್ಷೆಯಂತೆ!) ಇಸ್ಮಾಯಿಲ್ ಕುಳಿತಿದ್ದ ಬಸ್ಸು ಭಾರಿ ಶಬ್ದದೊಂದಿಗೆ ಓಲಾಡುತ್ತಾ ಸಾಗಿದೆ. ದಿಢಿಗ್ಗನೇ ಅಲರ್ಟ್ ಆದ ಇಸ್ಮಾಯಿಲ್ ಒಂದು ಕ್ಷಣವೂ ವೇಸ್ಟ್ ಮಾಡದೆ ತಮ್ಮ ಸ್ಮೃತಿಪಟಲದಲ್ಲಿ ಭದ್ರವಾಗಿ ಕುಳಿತಿದ್ದ ಹ್ಯಾಮರ್ ಗೆ ಕೈಹಾಕಿದ್ದಾರೆ. ಅದು ಕೈಗೆ ಸಿಗುತ್ತಿದ್ದಂತೆ ಸಾವು ಗೆದ್ದ ಸಂಭ್ರಮದಲ್ಲಿ ಎರಡೂ ಬದಿಯಲ್ಲಿದ್ದ ಕಿಟಕಿಗಳ ಗಾಜನ್ನು ಪುಡಿಪುಡಿ ಮಾಡಿದ್ದಾರೆ.
ಅದೇ ಕಿಟಕಿಗಳಿಂದ ಜನರನ್ನು ಹೊರಗೆ ತಳ್ಳುತ್ತಾ, ಇನ್ನೇನು ಬೆಂಕಿಯ ಬಿಸಿ ತಾಳಲಾಗುತ್ತಿಲ್ಲ ಎಂದಾಗ ಸ್ವತಃ ಅವರೂ ಹೊರಕ್ಕೆ ಜಿಗಿದಿದ್ದಾರೆ. ಎದುರಿಗೆ ಬಸ್ಸು ಧಗಧಗನೆ ಉರಿಯುತ್ತಿದ್ದರೆ ಜಬ್ಬಾರ್ ಟ್ರಾವೆಲ್ಸ್ ಬಸ್ಸನ್ನು ನೆನಪಿಸಿಕೊಳ್ಳುತ್ತಾ, ತಮ್ಮ ಬುದ್ಧಿಮತ್ತೆಗೆ ತಮ್ಮನ್ನೇ ಮೆಚ್ಚಿಕೊಳ್ಳುತ್ತಾ ... ಇಸ್ಮಾಯಿಲ್ ಅಲ್ಲಾಗೆ ಒಂದು ದೊಡ್ಡ ಸಲಾಂ ಹಾಕಿದ್ದಾರೆ. (ಕೃಪೆ: ಬೆಂಗಳೂರು ಮಿರರ್)












Click it and Unblock the Notifications