ಭವಾನಿ ರೇವಣ್ಣಗೆ ಟಿಕೆಟ್ ಡೌಟ್ ; ಕುಟುಂಬಕ್ಕಿಂತ ಕಾರ್ಯಕರ್ತರು ನನಗೆ ಮುಖ್ಯ: ಹೆಚ್ ಡಿ ಕುಮಾರಸ್ವಾಮಿ
ಹಾಸನ ವಿಚಾರವಾಗಿ ನನ್ನ ನಿರ್ಧಾರ ಬದಲಾಗುವುದಿಲ್ಲ, ನನಗೆ ಎರಡು ಮೂರು ದಿವಸ ಅವಕಾಶ ಕೊಡಿ ಸಕಾರಾತ್ಮಕವಾಗಿ ನಾವು ತೀರ್ಮಾನ ಮಾಡಿ ಹೇಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ,ಫೆಬ್ರವರಿ27: ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದುಕೊಂಡಿರುವ ದಳಪತಿಗಳಿಗೆ ಹಾಸನ ವಿಧಾನಸಭಾ ಕ್ಷೇತ್ರವೇ ಕಗ್ಗಂಟಾಗಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಹಾಸನ ಟಿಕೆಟ್ ವಿಚಾರವಾಗಿ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಎಂಟ್ರಿ ಕೊಟ್ಟಿದ್ದಾರೆ.
ಹಾಸನ ಟಿಕೆಟ್ ವಿಚಾರವಾಗಿ ಭಾನುವಾರ ಸಭೆ ಕರೆದಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಈ ಸಭೆ ರದ್ದಾಗಿರುವುದೇ ಗೊತ್ತೆ ಇಲ್ಲ ಎಂದು ಹೇಳಿಕೆಯನ್ನ ನೀಡಿದ್ದಾರೆ. ಒಂದು ಕಡೆ ಈ ಬಾರಿ ಟಿಕೆಟ್ ಗಾಗಿ ಪಟ್ಟು ಹಿಡಿದಿರುವ ರೇವಣ್ಣ ದಂಪತಿಗಳು ಒಂದು ಕಡೆಯಾದ್ರೆ, ಇನ್ನೊಂದು ಕಡೆ ಕಾರ್ಯಕರ್ತರಿಗೆ ಟಿಕೆಟ್ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವಾರ ನಡೆ ಏನು ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಕೇವಲ ಹಾಸನ ವಿಧಾನಸಭಾ ಕ್ಷೇತ್ರಕ್ಕಾಗಿ ನನ್ನ ಪಕ್ಷ ಹಾಳು ಮಾಡಿಕೊಳ್ಳಲು ನಾನು ತಯಾರಿಲ್ಲ, ಇದನ್ನು ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಭವಾನಿಯವಣ್ಣನಿಗೆ ಚಾಟಿ ಬೀಸಿದ್ದಾರೆ.
ನಾನು ಈಗಾಗಲೇ ರಾಜ್ಯಾದ್ಯಂತ ಒಂಟಿಯಾಗಿ ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇನೆ. ನನಗೂ ಎರಡು ಬಾರಿ ಆಪರೇಷನ್ ಆಗಿದೆ. ನಾನು ರೈತರ ಉಳಿವಿಗಾಗಿ ಕೆಲಸ ಮಾಡುತ್ತಿದ್ದೇನೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ನಾವು ಅಭ್ಯರ್ಥಿಯನ್ನ ಘೋಷಣೆ ಮಾಡುವವರೆಗೂ ಕಾರ್ಯಕರ್ತರು ಧೃತಿಗೆಡಬಾರದು ಎಂದು ಹಾಸನದ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕಿವಿ ಮಾತು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ದೇವೇಗೌಡರು ಮತ್ತು ನಾನು ಹಾಗೂ ಪಕ್ಷದ ಕೆಲವು ಮುಖಂಡರುಗಳು ಕುಳಿತು ಮೂರ್ನಾಲ್ಕು ದಿನಗಳಲ್ಲಿ ಹಾಸನ ಅಭ್ಯರ್ಥಿ ವಿಚಾರ ಗೊಂದಲ ಸೇರಿದಂತೆ 2ನೇ ಪಟ್ಟಿಯಲ್ಲಿ 50 ಹೆಚ್ಚು ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.

ಈಗಾಗಲೇ ನನ್ನ ನಿರ್ಧಾರ ಬದಲಾಗುವುದಿಲ್ಲ ಎಂದು ಹೇಳಿರುವ ಕುಮಾರಸ್ವಾಮಿ, ನನ್ನ ಕಾರ್ಯಕರ್ತರನ್ನ ಬಿಟ್ಟು ಕೊಡುವುದಿಲ್ಲ. ಕೆಲವು ಕಠಿಣ ತೀರ್ಮಾನ ಮಾಡುವಾಗ ನನಗೂ ಕಷ್ಟವಾಗುತ್ತದೆ. ಹಾಸನ ಟಿಕೆಟ್ ವಿಚಾರವಾಗಿ ನನ್ನ ಪಕ್ಷವನ್ನ ಹಾಳು ಮಾಡಿಕೊಳ್ಳಲು ನಾನು ಸಿದ್ದನಿಲ್ಲ. ಹಾಸನದ 7 ಕ್ಷೇತ್ರಗಳು ಸೇರಿದಂತೆ ರಾಜ್ಯದ 123 ಕ್ಕೂ ಹೆಚ್ಚು ಸ್ಥಾನವನ್ನು ನಾವು ಗೆಲ್ಲಬೇಕು. ಹೀಗಾಗಿ ನಾನು ರಾಜ್ಯಾದ್ಯಂತ ಪಕ್ಷ ಸಂಘಟನೆ ಹಾಗೂ ಪ್ರಚಾರವನ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ನಮ್ಮ ಪಕ್ಷವನ್ನ ಅಧಿಕಾರಕ್ಕೆ ತರಬೇಕು. ಹೀಗಾಗಿ ನೀವು ಪಕ್ಷ ಸಂಘಟನೆ ಮುಂದುವರಿಸಿ ನನಗೆ ಎರಡು ಮೂರು ದಿವಸ ಅವಕಾಶ ಕೊಡಿ ಸಕಾರಾತ್ಮಕವಾಗಿ ನಾವು ತೀರ್ಮಾನ ಮಾಡಿ ಹೇಳುತ್ತೇವೆ ನಿನಗೆ ಇದು ರಾಜಕೀಯ ಜೀವನದಲ್ಲೇ ಸತ್ವ ಪರೀಕ್ಷೆಯಾಗಿದೆ, ನನಗೆ ಕುಟುಂಬದ ಮೇಲೆ ವ್ಯಾಮೋಹ ಇಲ್ಲ. ಲಕ್ಷಾಂತರ ಕಾರ್ಯಕರ್ತರು ನನ್ನ ಕುಟುಂಬ ಇದ್ದಾಗೆ. ಅವರ ಹಿತ ಕಾಪಾಡಬೇಕಾದ್ದು ನನ್ನ ಧರ್ಮ ಎಂದು ಹಾಸನದ ಕಾರ್ಯಕರ್ತರಿಗೆ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.












Click it and Unblock the Notifications