ಬಿ. ವೈ. ವಿಜಯೇಂದ್ರಗೆ ಏಕಿಲ್ಲ ಉಪ ಚುನಾವಣೆ ಉಸ್ತುವಾರಿ?
ಬೆಂಗಳೂರು, ಅಕ್ಟೋಬರ್ 04; ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ಅಕ್ಟೋಬರ್ 30ರಂದು ನಡೆಯಲಿದೆ. ಬಿಜೆಪಿ ಇಂದು ಅಥವ ಮಂಗಳವಾರ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಬಿಜೆಪಿ ತಂತ್ರವನ್ನು ರೂಪಿಸುತ್ತಿದೆ.
ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಡೆದಿದೆ. ಸಭೆಯಲ್ಲಿ ಎರಡೂ ಕ್ಷೇತ್ರಕ್ಕೂ ತಲಾ ಮೂವರು ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲು ತೀರ್ಮಾನಿಸಲಾಯಿತು. ಜೆಡಿಎಸ್ ಎರಡೂ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದ್ದು, ಕಾಂಗ್ರೆಸ್ ಹಾನಗಲ್‌ಗೆ ಅಭ್ಯರ್ಥಿ ಅಂತಿಮಗೊಳಿಸಬೇಕಿದೆ.
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, "ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಪಕ್ಷದ ಆದ್ಯತೆ. ಅದಕ್ಕೆ ಪೂರಕವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗೆಲುವಿಗೆ ಸಂಘಟಿತ ಪ್ರಯತ್ನ ಮಾಡಲಾಗುತ್ತದೆ" ಎಂದು ಹೇಳಿದರು.
ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಸಚಿವರು, ಶಾಸಕರು, ಮಾಜಿ ಸಚಿವರು ಉಸ್ತುವಾರಿಗಳಾಗಿದ್ದಾರೆ. ಆದರೆ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರಗೆ ಪಕ್ಷ ಉಸ್ತುವಾರಿಯನ್ನು ನೀಡಿಲ್ಲ. ಅಕ್ಟೋಬರ್ 8 ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನವಾಗಿದ್ದು, ಬಳಿಕ ಚುನಾವಣಾ ಕಣ ರಂಗೇರಲಿದೆ.

ವಿಜಯೇಂದ್ರಗಿಲ್ಲ ಉಪ ಚುನಾವಣೆ ಉಸ್ತುವಾರಿ
ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ಉಪಾಧ್ಯಕ್ಷರು. ಆದರೆ ಅವರಿಗೆ ಉಪ ಚುನಾವಣೆ ಉಸ್ತುವಾರಿಯನ್ನು ಏಕೆ ನೀಡಿಲ್ಲ? ಎಂಬುದು ಪ್ರಶ್ನೆಯಾಗಿದೆ. ಅಕ್ಟೋಬರ್ 1ರಂದು ಪಕ್ಷ ಬಿಡುಗಡೆ ಮಾಡಿರುವ ಉಸ್ತುವಾರಿಗಳ ಪಟ್ಟಿಯಲ್ಲಿ ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ಸಚಿವರಿದ್ದಾರೆ. ಆದರೆ ಸಿಂಧಗಿ, ಹಾನಗಲ್‌ನಲ್ಲಿ ವಿಜಯೇಂದ್ರ ಉಸ್ತುವಾರಿಯಾಗಿಲ್ಲ.

ಶಿರಾ ಉಪ ಚುನಾವಣೆಯ ಗೆಲುವು
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆ ನಡೆದಿತ್ತು. ಬಿ. ವೈ. ವಿಜಯೇಂದ್ರಗೆ ಉಸ್ತುವಾರಿ ನೀಡಲಾಗಿತ್ತು. ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ ಅವರು ಉಪ ಚುನಾವಣೆ ಪ್ರಚಾರ ನೋಡಿಕೊಂಡಿದ್ದರು. 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 3ನೇ ಸ್ಥಾನ ಪಡೆದಿದ್ದ ಪಕ್ಷ ಉಪ ಚುನಾವಣೆಯಲ್ಲಿ ಗೆದ್ದಿತ್ತು. ಡಾ. ರಾಜೇಶ್ ಗೌಡ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟವನ್ನು ಹಾರಿಸಿದ್ದರು.

ಬಸವಕಲ್ಯಾಣ ಉಪ ಚುನಾವಣೆ
2020ರ ನವೆಂಬರ್‌ನಲ್ಲಿ ನಡೆದ ಬಸವಕಲ್ಯಾಣ ಉಪ ಚುನಾವಣೆಯ ಉಸ್ತುವಾರಿಯನ್ನು ಸಹ ಬಿ. ವೈ. ವಿಜಯೇಂದ್ರಗೆ ವಹಿಸಲಾಗಿತ್ತು. ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿದ್ದ ಪ್ರತಾಪ್ ಗೌಡ ಪಾಟೀಲ್ ಅಭ್ಯರ್ಥಿಯಾಗಿದ್ದರು. ಆದರೆ ಕಾಂಗ್ರೆಸ್‌ನ ಬಸನಗೌಡ ತುರವಿಹಾಳ ವಿರುದ್ಧ ಸೋಲು ಕಂಡಿದ್ದರು. ಶಿರಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಸಂಭ್ರಮಿಸಿದ್ದ ಬಿ. ವೈ. ವಿಜಯೇಂದ್ರ ಅಭಿಮಾನಿಗಳು ಬಸವಕಲ್ಯಾಣದಲ್ಲಿ ಬಿಜೆಪಿ ಸೋತಾಗ ಮೌನಕ್ಕೆ ಶರಣಾಗಿದ್ದರು. ಈಗ ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆ ವಿಜಯೇಂದ್ರಗೆ ಸಿಕ್ಕಿಲ್ಲ.

ಸಿಂಧಗಿ ಕ್ಷೇತ್ರದ ಉಸ್ತುವಾರಿಗಳು
ಸಿಂಧಗಿ ಕ್ಷೇತ್ರದಲ್ಲಿ 2018ರಲ್ಲಿ ಜೆಡಿಎಸ್‌ನ ಎಂ. ಸಿ. ಮನಗೂಳಿ ಗೆದ್ದಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಕ್ಷೇತ್ರಕ್ಕೆ ಬಿಜೆಪಿ ಉಸ್ತುವಾರಿಗಳಾಗಿ ಸಚಿವರಾದ ಗೋವಿಂದ ಕಾರಜೋಳ, ವಿ. ಸೋಮಣ್ಣ, ಸಿ. ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಇದ್ದಾರೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್, ಪಿ. ರಾಜೀವ್ ಮುಂತಾದವರು ಉಸ್ತುವಾರಿಯಾಗಿದ್ದಾರೆ.
Recommended Video

ಹಾನಗಲ್ ಉಪ ಚುನಾವಣೆ
ಬಿಜೆಪಿ ಶಾಸಕರಾಗಿದ್ದ ಸಿ. ಎಂ. ಉದಾಸಿ ನಿಧನದಿಂದ ತೆರವಾದ ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಸಚಿವರಾದ ಮುರುಗೇಶ ನಿರಾಣಿ, ಜೆ. ಸಿ. ಮಾಧುಸ್ವಾಮಿ, ಬಿ. ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್ ಉಸ್ತುವಾರಿಗಳು. ಎನ್. ರವಿಕುಮಾರ್, ಮಹೇಶ್ ಟೆಂಗಿನಕಾಯಿ, ರಾಜುಗೌಡ, ನೆಹರು ಓಲೇಕಾರ್, ಎಂ. ಚಂದ್ರಪ್ಪ ಮುಂತಾದ ನಾಯಕರು ಉಸ್ತುವಾರಿಗಳಾಗಿದ್ದಾರೆ.












Click it and Unblock the Notifications