ಪ್ರತಿ ತಿಂಗಳು ಹಣ ಕೊಡ್ತೀವಿ ಅಂತ ಹೇಳಿಲ್ಲ: ಗೃಹಲಕ್ಷ್ಮಿಯರಿಗೆ ಶಾಕ್ ಕೊಟ್ಟ ಡಿಸಿಎಂ
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಕಳೆದ ಕೆಲವು ತಿಂಗಳಿನಿಂದ ಹಣ ಜಮೆಯಾಗಿಲ್ಲ. ಈ ಬಗ್ಗೆ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಇಲ್ಲಿವರೆಗೆ ಶೀಘ್ರದಲ್ಲೇ ಹಣ ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದ ಸರ್ಕಾರ, ಇದೀಗ ದಿಢೀರ್ ಯೂಟರ್ನ್ ತೆಗೆದುಕೊಂಡಂತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಗೃಹಲಕ್ಷ್ಮಿ ಹಣವನ್ನು ನಾವು ಪ್ರತಿ ತಿಂಗಳು ಕೊಡ್ತೀವಿ ಅಂತಾ ಹೇಳಿಲ್ಲ ಎಂದು ಡಿಕೆಶಿ ಹೇಳಿದ್ದು, ಸಂಚಲನ ಸೃಷ್ಟಿಸಿದೆ.
ಬಳ್ಳಾರಿಯಲ್ಲಿ ಇಂದು ನಡೆದ ಕಾಂಗ್ರೆಸ್ ಸಾಧನಾ ಸಮಾವೇಶ ಕುರಿತಾದ ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ಅವರು ಈ ರೀತಿ ಮಾತನಾಡಿರುವುದು ಅಚ್ಚರಿ ಮೂಡಿಸಿದೆ. ಇಲ್ಲಿವರೆಗೆ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಹಣದ ಕೊರತೆ ಇಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದ ಡಿಸಿಎಂ ಇದೀಗ ದಿಢೀರನೆ ಉಲ್ಟಾ ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನೋಡಿ... ತಿಂಗಳು ತಿಂಗಳು ಹಣ ಕೊಡ್ತೀವಿ ಅಂತ ನಾವು ಹೇಳಿಲ್ಲ ಎಂದಿದ್ದಾರೆ. ನೀವು ತೆರಿಗೆ ಕಟ್ಟುತ್ತಾ ಇರಬೇಕು, ನಾವು ಹಣ ಕೊಡುತ್ತಾ ಇರಬೇಕು. ಈಗ ಉದಾಹರಣೆಗೆ ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆಯೇ ಹಣ ಬಂದುಬಿಡುತ್ತಾ? ಎರಡ್ಮೂರು ವರ್ಷ ಆಗುತ್ತೆ ಅಲ್ವಾ? ಅದೇ ರೀತಿ ಈ ಹಣ ಕೂಡ ಬಂದಾಗ ಬರುತ್ತೆ ಎನ್ನುವ ಮೂಲಕ ಜಾರಿಕೊಂಡಿದ್ದಾರೆ.
ನಾಳೆ ನಡೆಯಲಿರುವ ಸರ್ಕಾರದ ಎರಡು ವರ್ಷಗಳ ಸಾಧನೆಯ ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಉಕ್ಕಿನ ನಗರಿ ಹೊಸಪೇಟೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಇಂದು ವೇದಿಕೆಗೆ ಭೇಟಿ ನೀಡಿ ಅಂತಿಮ ತಯಾರಿಗಳನ್ನು ಮೇಲ್ವಿಚಾರಣೆ ನಡೆಸಿದ್ದೇನೆ. ವಿಜಯನಗರ ಅನೇಕ ಇತಿಹಾಸಗಳನ್ನು ತನ್ನೊಳಗಿಟ್ಟುಕೊಂಡಿರುವ ಜಿಲ್ಲೆ. ಮಾಜಿ ಪ್ರಧಾನಿಗಳಾದ ಶ್ರೀಮತಿ ಇಂದಿರಾ ಗಾಂಧಿಯವರು ಇಲ್ಲಿಗೆ ಬಂದು ಭಾಷಣ ನೀಡಿದ ಇತಿಹಾಸವಿದೆ. ಹೀಗಾಗಿ ನಾಳಿನ ಕಾರ್ಯಕ್ರಮದಲ್ಲಿ ಅವರ ಪುತ್ಥಳಿಯನ್ನೂ ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಈಗಾಗಲೇ ವಿಜಯನಗರ ಜಿಲ್ಲೆಯಲ್ಲಿ 79 ಸಾವಿರ ರೈತರಿಗೆ ಪೋಡಿ ಮಾಡಿಕೊಟ್ಟು, ಪೋಡಿ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ. ಆ ಮೂಲಕ ದೇಶಕ್ಕೆ ಮಾದರಿ ರಾಜ್ಯವಾಗಿ ಕರ್ನಾಟಕ ದಾಪುಗಾಲು ಇಟ್ಟಿದೆ. ಈ ಎರಡು ವರ್ಷಗಳ ಸಂಭ್ರಮ ಕೇವಲ ಆಚರಣೆಯಲ್ಲ; ನಮಗೆ ಅವಕಾಶ ಕೊಟ್ಟ ಜನರ ಋಣ ತೀರಿಸುವ ಸಂಕಲ್ಪ. ನಾವು ಕೇವಲ ಗ್ಯಾರಂಟಿಗಳ ಮೇಲೆ ಮಾತನಾಡುತ್ತಿಲ್ಲ. ಬಡವರಿಗೆ ಆಗಬೇಕಾದುದನ್ನು ಇಲಾಖಾವಾರು ಕಾರ್ಯಕ್ರಮಗಳನ್ನು ನಡೆಸಿ, ಅನುಕೂಲ ಮಾಡಿಕೊಡುತ್ತಿದ್ದೇವೆ. ಪ್ರತಿ ಹಂತದಲ್ಲೂ ಇತರ ಪಕ್ಷದವರಿಗೆ ಕಾಂಗ್ರೆಸ್ ಆಡಳಿತ ಮಾದರಿಯಾಗಿದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವ ಉದ್ದೇಶದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಬೆನ್ನುತಟ್ಟಿಕೊಂಡಿದ್ದಾರೆ.
ಬೆಂಗಳೂರಿಗರೊಂದಿಗೆ ನಾನಿದ್ದೇನೆ!
ಬೆಂಗಳೂರಿನ ಮಳೆ ಪರಿಸ್ಥಿತಿಯ ಕುರಿತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ, ಈಗಾಗಲೇ ಮಾಹಿತಿ ಪಡೆದಿದ್ದೇನೆ. ಕಳೆದ ನಾಲ್ಕು ದಿನದಿಂದಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ಈಗಾಗಲೇ ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಿ, ಕೇಂದ್ರ ವಿಪತ್ತು ಪರಿಹಾರ ನಿಧಿ ಹಾಗೂ ವಿಶ್ವಬ್ಯಾಂಕ್ ನೆರವಿನೊಂದಿಗೆ ಬೆಂಗಳೂರಿನ ಎಲ್ಲ ರಾಜಕಾಲುವೆಗಳನ್ನು ಶಾಶ್ವತವಾಗಿ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿಪಡಿಸಲು ಯೋಜನೆಗಳನ್ನು ರೂಪಿಸಿದ್ದೇವೆ ಎಂದಿದ್ದಾರೆ.
ನಾನು ಸಮರ್ಪಣಾ ಸಂಕಲ್ಪದ ನಿಮಿತ್ತ ವಿಜಯನಗರದಲ್ಲೇ ಇರಬೇಕೆಂದು ಬಂದಿದ್ದೆ. ಆದರೆ ಈಗ ಬೆಂಗಳೂರಿಗೆ ಮರಳುತ್ತಿದ್ದೇನೆ. ಬೆಂಗಳೂರಿನ ಮಳೆ ಪರಿಸ್ಥಿತಿ ಅವಲೋಕಿಸಲಿದ್ದೇನೆ. ನಾನು ಇಲ್ಲಿಗೆ ಯಾವುದೇ ಪ್ರವಾಸಕ್ಕೆ ಬಂದಿಲ್ಲ. ಪ್ರಕೃತಿ ಯಾರ ಕೈನಲ್ಲೂ ಇಲ್ಲ. ಆದರೆ, ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ವಿಪಕ್ಷಗಳಿಂದ ಡಿಕೆಶಿಗೆ ತರಾಟೆ
ಡಿಕೆ ಶಿವಕುಮಾರ್ ಹೇಳಿಕೆ ಬೆನ್ನಲ್ಲೇ ಬಿಜೆಪಿ ನಾಯಕ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಇಂಧನ ಸಚಿವ ಕೆಜೆ ಜಾರ್ಜ್ ಸಾಹೇಬರು ಗೃಹಲಕ್ಷ್ಮೀ ಹಣವನ್ನ ತಿಂಗಳು ತಿಂಗಳು ಕರೆಕ್ಟಾಗಿ ಕೊಡೋಕೆ ಅದೇನು ಸಂಬಳಾನಾ? ಅಂತ ಕರ್ನಾಟಕದ ಮಹಿಳೆಯರ ಸ್ವಾಭಿಮಾನವನ್ನೇ ಪ್ರಶ್ನೆ ಮಾಡಿ ಅವಮಾನ ಮಾಡಿದ್ದರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಸಾಹೇಬರು ಗೃಹಲಕ್ಷ್ಮಿ ಹಣವನ್ನ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಇದೇನಾ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಖಟಾಖಟ್ ಖಟಾಖಟ್ ಮಾಡೆಲ್? ಎಂದು ವ್ಯಂಗ್ಯವಾಡಿದ್ದಾರೆ. ನಾಡಿನ ತಾಯಂದಿರಿಗೆ, ಅಕ್ಕ-ತಂಗಿಯರಿಗೆ ನಂಬಿಕೆ ದ್ರೋಹ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಮಹಿಳೆಯರ ಶಾಪ ತಟ್ಟದೇ ಇರಲ್ಲ ಎಂದಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ಗೃಹಲಕ್ಷ್ಮಿ ಯೋಜನೆ ಘೋಷಿಸಿ, ಪ್ರತಿ ತಿಂಗಳು ಹಣ ಕೊಡುತ್ತೀವಿ ಅಂತ ಹೇಳಿ ಈಗ ಪ್ರತಿ ತಿಂಗಳು ಗೃಹ ಲಕ್ಷ್ಮಿ ಹಣ ಕೊಡೋಕೆ ಆಗೋದಿಲ್ಲ ಅಂತ ಹೇಳುತ್ತಿರುವುದು ಈ ಯೋಜನೆಯ ಹಿಂದಿನ ಉದ್ದೇಶ ವೋಟ್ ಪಡೆಯುವುದಕ್ಕೆ ಹೊರತು ಮಹಿಳೆಯರ ಕಲ್ಯಾಣವಾಗಲಿ, ಸಬಲೀಕರಣಕ್ಕಲ್ಲ ಎಂದು ಮತದಾರರು, ಅದರಲ್ಲೂ ಮಹಿಳೆಯರು ತಿಳಿದುಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೂರಿದ್ದಾರೆ.
ಇಂತಹ ಅವಕಾಶವಾದಿಗಳನ್ನು, ಕುಟಿಲ ರಾಜಕಾರಣ ಮಾಡುವವರನ್ನು ಮತದಾರರು, ಅದರಲ್ಲೂ ಮಹಿಳೆಯರು ತಿರಸ್ಕರಿಸಬೇಕು. ಚುನಾವಣಾ ಸಮಯದಲ್ಲಿ, ಹಬ್ಬ-ಹರಿದಿನದ ಸಮಯದಲ್ಲಿ ಮಾತ್ರ ಕೊಡುವ ಗೃಹಲಕ್ಷ್ಮಿ ಹಣ ಮಹಿಳೆಯರ ಕಲ್ಯಾಣಕ್ಕಲ್ಲ ಬದಲಾಗಿ ಚುನಾವಣೆಯಲ್ಲಿ ವೋಟ್ ಪಡೆಯಲು ಮಾಡುತ್ತಿರುವ ತಂತ್ರವಷ್ಟೇ ಎಂದು ಟೀಕಿಸಿದ್ದಾರೆ.
ಸುಳ್ಳು ಹೇಳಿ ಯಾಮಾರಿಸುವುದು ಕಾಂಗ್ರೆಸ್‌ನ ಹುಟ್ಟು ಗುಣ. ಡಿಕೆ ಶಿವಕುಮಾರ್ ಅವರೇ ನಿಮಗೆ ಎಷ್ಟು ನಾಲಿಗೆ? ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ನೇರವಾಗಿ ಮಹಿಳೆಯರ ಖಾತೆಗೆ ಹಾಕುತ್ತೇವೆ ಎಂದು ಅಂದು ನೀವು ಹೇಳಿದ್ದೀರಿ. ಈಗ ಆ ರೀತಿ ಹೇಳೇ ಇಲ್ಲ ಎಂದು ಉಲ್ಟಾ ಹೊಡೆಯುತ್ತಿದ್ದೀರಿಲ್ಲ ನಿಮಗೆ ನಾಚಿಕೆಯಾಗಲ್ವ? ಎಂದು ಜೆಡಿಎಸ್ ಕೂಡ ತರಾಟೆಗೆ ತೆಗೆದುಕೊಂಡಿದೆ.












Click it and Unblock the Notifications