Gruha Lakshmi: ಗೃಹಲಕ್ಷ್ಮಿ ಯೋಜನೆ ಚಾಲನೆ ದಿನಾಂಕ ಮುಂದೂಡಿಕೆ: ಆಗಸ್ಟ್ 30ಕ್ಕೆ ಉದ್ಘಾಟನೆ
ಬೆಂಗಳೂರು ಆಗಸ್ಟ್ 19: ಕಾಂಗ್ರೆಸ್‌ನ ಚುನಾವಣೆ ಘೋಷಣೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯ ಉದ್ಗಾಟನೆಯನ್ನು ಆಗಸ್ಟ್ 27ರ ಬದಲು ಆಗಸ್ಟ್ 30ಕ್ಕೆ ಮುಂದೂಡಲಾಗಿದೆ. ಮಾತ್ರವಲ್ಲದೆ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಮಾಡಬೇಕಿದ್ದ ಜಾಗವನ್ನು ಕೂಡ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ಬೆಳಗಾವಿಯಲ್ಲಿ ನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಈ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಸಮಾವೇಶವನ್ನು ನಡೆಸಲು ರಾಜ್ಯ ಸರ್ಕಾರವೇ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಏನಿದು ಗೃಹಲಕ್ಷ್ಮಿ ಯೋಜನೆ?
ಚುನಾವಣೆ ವೇಳೆ ಘೋಷಿಸಿದಂತೆ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಯೋಜನೆಯೇ ಗೃಹಲಕ್ಷ್ಮೀ ಯೋಜನೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈಗ ಅಧಿಕಾರಕ್ಕೆ ಬಂದ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ.
ಗೃಹಲಕ್ಷ್ಮೀ ಯೋಜನೆಗೆ ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಭೌತಿಕವಾಗಿಯಾದರೂ ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಸರ್ಕಾರ ನೀಡಿದೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಹೊಂದಿರಲೇಬೇಕು.1. ರೇಷನ್ ಕಾರ್ಡ್2. ಬ್ಯಾಂಕ್ ಪಾಸ್‌ಬುಕ್3. ಆಧಾರ್ ಕಾರ್ಡ್4. ಯಾವುದಾದರೂ ಗುರುತಿನ ಚೀಟಿ ಬೇಕಾಗುತ್ತದೆ. ಗೃಹಲಕ್ಷ್ಮೀ ಯೋಜನೆಯಡಿ 2,000 ರೂ. ಪಡೆಯಲು ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಸೇರಿ ಯಾವುದಾದರೂ ಒಂದು ಇರಲೇಬೇಕು. ಇಲ್ಲದಿದ್ದರೆ ಯೋಜನೆಯ ಲಾಭ ಸಿಗದು.
ನೋಂದಣಿ ಮಾಡುವುದು ಹೇಗೆ?
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಸರ್ಕಾರ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿದ್ದು ಅವರ ಮೂಲಕ ಕೂಡ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಪ್ರತಿ ಫಲಾನುಭವಿಗೆ ನೋಂದಣಿ ಮಾಡಿಕೊಳ್ಳಲು ಸರ್ಕಾರವೇ ದಿನಾಂಕ, ಸಮಯ ಮತ್ತು ಸ್ಥಳವನ್ನು ನಿಗದಿ ಮಾಡುತ್ತದೆ. 1902 ಕರೆ ಮಾಡುವ ಮೂಲಕ ಇಲ್ಲವೇ 8147500500 ಈ ಸಂಖ್ಯೆಗೆ ಎಸ್‌ಎಂಎಸ್ ಮಾಡುವ ಮೂಲಕ ನೀವು ನೋಂದಣಿ ಮಾಡಿಕೊಳ್ಳುವ ದಿನಾಂಕ ಸಮಯ ಮತ್ತು ಸ್ಥಳದ ಮಾಹಿತಿ ಪಡೆಯಬಹುದಾಗಿದೆ. ನಿಗದಿತ ಸಮಯದಲ್ಲಿ ಭೇಟಿ ಮಾಡಲು ಸಾಧ್ಯವಾಗದೇ ಇದ್ದರೆ ಸಂಜೆ 5 ಗಂಟೆಯ ಬಳಿಕ ತೆರಳಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ನೋಂದಣಿಯಾದ ನಂತರ ಅರ್ಹ ಫಲಾನುಭವಿಗಳಿಗೆ ಅನುಮೋದನೆ ಪತ್ರ ನೀಡಲಾಗುತ್ತದೆ.
ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ, ಯಾರಿಗೂ ಹಣ ಕೊಡಬೇಡಿ ಎಂದು ಸರ್ಕಾರ ಮನವಿ ಮಾಡಿದೆ. ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಕೊನೆಯ ದಿನಾಂಕ ಕೂಡ ಇರುವುದಿಲ್ಲ. ಯಾವುದೇ ಗೊಂದಲ ಇದ್ದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 1902 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಕರೆ ಮಾಡಬೇಕಾಗಿರುತ್ತದೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಹಣ ಮಾಸಿಕ 2,000 ರೂ. ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತದೆ.












Click it and Unblock the Notifications