ಚಾಮರಾಜನಗರದ ಹನೂರ ಅಭಿವೃದ್ಧಿಗೆ ಪ್ಯಾಕೇಜ್ ರೂಪಿಸಲಾಗುವುದು: ಬೊಮ್ಮಾಯಿ
ಹನೂರು ತಾಲ್ಲೂಕಿನ ಅಭಿವೃದ್ಧಿಗೆ ಒಂದು ವಾರದೊಳಗೆ ವಿಶೇಷ ಪ್ಯಾಕೇಜ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಚಾಮರಾಜನಗರ, ಮಾರ್ಚ್ 01: ಹನೂರು ತಾಲ್ಲೂಕಿನ ಅಭಿವೃದ್ಧಿಗೆ ಒಂದು ವಾರದೊಳಗೆ ವಿಶೇಷ ಪ್ಯಾಕೇಜ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಬುಧವಾರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯಸಂಕಲ್ಪ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹನೂರಿನ ಕುಡಿಯುವ ನೀರಿನ ಯೋಜನೆ 3ನೇ ಹಂತಕ್ಕೆ ಬರುವ ದಿನಗಳಲ್ಲಿ ಅನುಮೋದನೆ ನೀಡಲಾಗುವುದು. ರಾಜ್ಯ ಹೆದ್ದಾರಿ ನರೇಂದ್ರ ಮೋದಿ ಮತ್ತು ನಮ್ಮ ಸರ್ಕಾರದ ಕಾಣಿಕೆ. ಅವರ ಕಾಲದಲ್ಲಿ 6 ಸಾವಿರ ಕಿ.ಮೀ. ಹೆದ್ದಾರಿಯಾಗಿವೆ ಹಾಗೂ ರೈಲ್ವೇ ಯೋಜನೆಗಳಾಗಿವೆ. ಅಭಿವೃದ್ಧಿಯ ಪಥದಲ್ಲಿ ದೇಶ ನಡೆಯುತ್ತಿದ್ದು, ವಿಶ್ವದಲ್ಲಿ ಭಾರತಕ್ಕೆ ದೊಡ್ಡ ಸ್ಥಾನ ದೊರೆತಿದೆ. ಯಡಿಯೂರಪ್ಪ ಅವರು ಕರ್ನಾಟಕವನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ನವ ಕರ್ನಾಟದಿಂದ ನವ ಭಾರತವನ್ನು ನಿರ್ಮಾಣ ಮಾಡೋಣ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯಕ್ರಮಗಳು ಮುಂದುವರೆಯಬೇಕಾದರೆ, ದೀನದಲಿತರು, ಬಡವರು ಉದ್ಧಾರವಾಗಬೇಕಾದರೆ ಬಿಜೆಪಿ ಅನ್ನು ಕರ್ನಾಟಕದಲ್ಲಿ ಸಂಪೂರ್ಣ ಬಹುಮತದೊಂದಿಗೆ ತಂದು ಮತ್ತೊಮ್ಮೆ ಜನಪರವಾದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು: ಸಿಎಂ
ಈ ಹನೂರು ಕ್ಷೇತ್ರ ಹಿಂದೆಯೇ ಅಭಿವೃದ್ಧಿಯಾಗಬೇಕಿತ್ತು. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಈ ಭಾಗದಿಂದ ಆಯ್ಕೆಯಾಗಿದ್ದ ಮುಖ್ಯಮಂತ್ರಿಗಳ ಕಾಣಿಕೆ ಏನು? ಎಂದು ಪ್ರಶ್ನಿಸಿದ ಅವರು ಈ ಭಾಗಕ್ಕೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದ್ದು ಬಿಜೆಪಿ ಸರ್ಕಾರ. ಗಡಿಯಂಚಿನ ಜನರ ದುಸ್ಥಿತಿಯನ್ನು ನೋಡಿದಾಗ 60 ವರ್ಷ ಏನು ಆಡಳಿತ ಮಾಡಿದ್ದಾರೆ ಎಂದು ತಿಳಿಯುತ್ತದೆ. ಬಡವರನ್ನು ಬಡವರನ್ನಾಗಿ ಇಟ್ಟು ಮತ ಬ್ಯಾಂಕ್‍ಗಳನ್ನಾಗಿ ಮಾಡಿಕೊಂಡಿದ್ದರು. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ನೀರಾವರಿ, ಹಾಸ್ಟಲ್, ಬಿಡಿಎ ನಲ್ಲಿ ಭ್ರಷ್ಟಾಚಾರ ಮಾಡಿದರು. ಚಾಮರಾಜನಗರದಲ್ಲಿ ಮಾತ್ರ ಕಾಂಗ್ರೆಸ್ ಉಳಿದುಕೊಂಡಿದ್ದು, ಇಲ್ಲಿ ಕಾಂಗ್ರೆಸ್ ಬೇರು ಸಮೇತ ಕಿತ್ತೊಗೆದು ಕಮಲವನ್ನು ಅರಳಿಸಬೇಕು ಎಂದು ತಿಳಿಸಿದರು.

ಜನಪರ ಯೋಜನೆ:ದುಡಿಮೆಗೆ ಮಹತ್ವ
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತ ವಿದ್ಯಾನಿಧಿ, ಸ್ತ್ರೀ ಸಾಮರ್ಥ್ಯ ಯೋಜನೆ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ಕೂಲಿ ಮಾಡುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಒಂದು ಸಾವಿರ ಒದಗಿಸುವ ಯೋಜನೆಯನ್ನು ಈ ಬಾರಿಯ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ. ಪಿಯುಸಿ, ಪದವಿ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ದೀನ ದಲಿತರಿಗೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೆ ಬೆಂಬಲ ನೀಡಲಾಗಿದೆ. ದುಡಿಮೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.












Click it and Unblock the Notifications