ಕರ್ನಾಟಕದಲ್ಲಿ ಇಂಧನ ಸೆಸ್ ವಿಧಿಸಲು ಸರ್ಕಾರದ ಚಿಂತನೆ
ಬೆಳಗಾವಿ, ಡಿಸೆಂಬರ್ 13: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಇಂಧನದ ಮೇಲೆ ಸೆಸ್ ವಿಧಿಸಲು ಯೋಜಿಸುತ್ತಿದ್ದು, ಇದನ್ನು ಅಸಂಘಟಿತ ವಲಯಗಳ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಈ ಸಂಬಂಧ ಕಾರ್ಮಿಕ ಇಲಾಖೆ ವರದಿ ಸಿದ್ಧಪಡಿಸಿದ್ದು, ಈ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವ ಸಾಧ್ಯತೆ ಇದೆ. ಕಾರ್ಮಿಕ ಇಲಾಖೆಯು ತನ್ನ ವರದಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ.ವರೆಗೆ ಸೆಸ್ ವಿಧಿಸಲು ಪ್ರಸ್ತಾಪಿಸಿದ್ದು, ವರ್ಷಕ್ಕೆ ಸುಮಾರು 2,000 ಕೋಟಿ ಆದಾಯ ಗಳಿಸಲು ಮುಂದಾಗಿದೆ.

ಅಸಂಘಟಿತ ವಲಯಕ್ಕೆ ಹೇಗೆ ಲಾಭ:
ಕಾರ್ಮಿಕ ಇಲಾಖೆಯು ಈ ಹಣವನ್ನು ಅಸಂಘಟಿತ ವಲಯಗಳ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಿಕೊಳ್ಳಲು ಯೋಜಿಸಿದೆ. ಅಧಿಕಾರಿಗಳು ಹೇಳುವಂತೆ ಇಲಾಖೆಯು ನಿಯಂತ್ರಣಕ್ಕೆ ಒಳಪಡದ ಮತ್ತು ಯಾವುದೇ ಮಂಡಳಿಗಳ ವ್ಯಾಪ್ತಿಗೆ ಒಳಪಡದ 43 ವಲಯಗಳನ್ನು ಗುರುತಿಸಿದೆ. ಇಂತಹ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆಯು ಕಲ್ಯಾಣ ಯೋಜನೆಗಳಿಗೆ ಧನಸಹಾಯ ಮಾಡಲು ಆದಾಯವನ್ನು ಗಳಿಸುವ ಮಾರ್ಗಗಳನ್ನು ನೋಡುತ್ತಿದ್ದು, ಸೆಸ್ ಮೂಲಕ ಉತ್ಪತ್ತಿಯಾಗುವ ಈ ನಿಧಿಯನ್ನು ಅಸಂಘಟಿತ ವಲಯಗಳ ಕಾರ್ಮಿಕರ ಆರೋಗ್ಯ, ಶಿಕ್ಷಣ ಮತ್ತು ಅಪಘಾತ ವ್ಯಾಪ್ತಿಗೆ ಬಳಸಿಕೊಳ್ಳಲು ಕಾರ್ಮಿಕ ಇಲಾಖೆ ಯೋಜಿಸುತ್ತಿದೆ.
ಇಂಧನ ವೆಚ್ಚವನ್ನು ಹೆಚ್ಚಿಸುವ ಪ್ರಸ್ತಾಪ:
ಸಿಎಂಗೆ ಸಲ್ಲಿಸುವ ವರದಿ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅದು ಸಲ್ಲಿಕೆಯಾದ ನಂತರ ಸಿಎಂ ಸಿದ್ದರಾಮಯ್ಯ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಸಾರಿಗೆ ಮಂಡಳಿಯಂತಹ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಮಂಡಳಿಗಳನ್ನು ಪ್ರಾರಂಭಿಸಿದೆ ಮತ್ತು ಅಂತಹ ಮಂಡಳಿಗಳ ಅಡಿಯಲ್ಲಿ ಬರುವ ಜನರಿಗೆ ಉದ್ದೇಶಿತ ಯೋಜನೆ ಅನ್ವಯಿಸುವುದಿಲ್ಲ.
ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಣವಿಲ್ಲ ಎಂದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರವು ಈ ಹೊಸ ಪ್ರಸ್ತಾವನೆಯೊಂದಿಗೆ ಮುಂದುವರಿಯಲು ನಿರ್ಧರಿಸಿದರೆ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ.












Click it and Unblock the Notifications