Government employee; ಸರ್ಕಾರಿ ನೌಕರರ ವರ್ಗಾವಣೆ ದಿನಾಂಕ ವಿಸ್ತರಣೆ
ಬೆಂಗಳೂರು, ಜೂನ್ 30: ಕರ್ನಾಟದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದೆ. ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಿದೆ. ಈ ಹಿಂದಿನ ಆದೇಶದಲ್ಲಿ ಜೂನ್ 30ರ ತನಕ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು.
ಶುಕ್ರವಾರ ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು-1) ವೀರಭದ್ರ ಆದೇಶ ಹೊರಡಿಸಿದ್ದಾರೆ.

ಆದೇಶದಲ್ಲಿ ದಿನಾಂಕ 30/05/2023ರ ಸರ್ಕಾರಿ ಆದೇಶದಲ್ಲಿ ವಿವರಿಸಿರುವ ಷರತ್ತಿಗೊಳಪಟ್ಟು, 2023-24ನೇ ಸಾಲಿನ ಸಾರ್ವತ್ರಿಕ ವರ್ಗಾವಣಾ ಅವಧಿಯನ್ನು ದಿನಾಂಕ 03/07/2023ರವರೆಗೆ ವಿಸ್ತರಿಸಿ ಆದೇಶಿಸಿದೆ ಎಂದು ಹೇಳಿದ್ದಾರೆ.
ಆದೇಶದ ವಿವರ; ಶುಕ್ರವಾರ ಹೊರಡಿಸಿರುವ ಆದೇಶ 2023-24ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗಳು ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರಿ ಆದೇಶ ಸಂಖ್ಯೆ ದಿನಾಂಕ 30/05/2023, ಸರ್ಕಾರಿ ಆದೇಶ ಸಂಖ್ಯೆ ದಿನಾಂಕ 16/6/2023ರ ಪ್ರಸ್ತಾವನೆ ಉಲ್ಲೇಖಿಸಿ ಹೊರಡಿಸಲಾಗಿದೆ.
ದಿನಾಂಕ 30/05/2023ರ ಸರ್ಕಾರಿ ಆದೇಶದಲ್ಲಿ, 2023-24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಸದರಿ ಆದೇಶದಲ್ಲಿ ವಿವರಿಸಿರುವ ಷರತ್ತುಗಳಿಗೊಳಪಟ್ಟು ದಿನಾಂಕ 15/06/2023ರವರೆಗೆ ಕೈಗೊಳ್ಳಲು ಆದೇಶಿಸಲಾಗಿತ್ತು.
ಮುಂದುವರೆದು ದಿನಾಂಕ 16/06/2023ರ ಸರ್ಕಾರಿ ಆದೇಶದಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ದಿನಾಂಕ 30/06/2023ರವರೆಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ. ಸದರಿ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು ಅವಶ್ಯವೆಂದು ಪರಿಗಣಿಸಿ ಸರ್ಕಾರವು ಈ ಆದೇಶ ನೀಡಿದೆ ಎಂದು ಹೇಳಿದೆ.
ಇಂದಿನ ಆದೇಶದಲ್ಲಿ ದಿನಾಂಕ 30/05/2023ರ ಸರ್ಕಾರಿ ಆದೇಶದಲ್ಲಿ ವಿವರಿಸಿರುವ ಷರತ್ತಿಗೊಳಪಟ್ಟು, 2023-24ನೇ ಸಾಲಿನ ಸಾರ್ವತ್ರಿಕ ವರ್ಗಾವಣಾ ಅವಧಿಯನ್ನು ದಿನಾಂಕ 03/07/2023ರವರೆಗೆ ವಿಸ್ತರಿಸಿ ಆದೇಶಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೂನ್ 28ರಂದು ಟ್ವೀಟ್ ಮಾಡಿ, 'ಪಂಚಗ್ಯಾರಂಟಿಗಳ ಕರ್ನಾಟಕ ಕಾಂಗ್ರೆಸ್ ಸರಕಾರ, ಈಗ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ. ಅದು 'ಕಾಸಿಗಾಗಿ ಪೋಸ್ಟಿಂಗ್' ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ' ಎಂದು ಪತ್ರಿಕಾ ವರದಿಯನ್ನು ಉಲ್ಲೇಖಿಸಿದ್ದರು.
ಮಾರ್ಗಸೂಚಿ; ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಗಳ ಅನ್ವಯ ವರ್ಗಾವಣೆಗಳನ್ನು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಮಾತ್ರ ಷರತ್ತುಗಳಿಗೊಳಪಟ್ಟು ಮಾಡಬಹುದಾಗಿದೆ. ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ವರ್ಗದ ಅಧಿಕಾರಿ/ ನೌಕರರಿಗೆ ಅನ್ವಯವಾಗುವಂತೆ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇಕಡಾ 6ರನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ.
ದಿನಾಂಕ 22/11/2001ರ ಸರ್ಕಾರದ ಆದೇಶದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯಲ್ಲಿದ್ದ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳನ್ವಯ ವಿಸ್ತ್ರತ ಮಾರ್ಗಸೂಚಿಗಳನ್ನು ನೀಡಲಾಗಿದೆ. ವರ್ಗಾವಣೆ ಕೈಗೊಳ್ಳುವಾಗ ಇದನ್ನು ಪಾಲಿಸಬೇಕಿದೆ.
'ವರ್ಗಾವಣೆ' ಎಂದರೆ ಒಬ್ಬ ಸರ್ಕಾರಿ ನೌಕರನನ್ನು ಇನ್ನೊಂದು ಹೊಸ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು ಒಂದು ಕೇಂದ್ರ ಸ್ಥಾನದಿಂದ ಮತ್ತೊಂದು ಕೇಂದ್ರ ಸ್ಥಾನಕ್ಕೆ ಅಥವಾ ಒಂದೇ ಕೇಂದ್ರ ಸ್ಥಾನದಲ್ಲಿರುವ ಒಂದು ಕಛೇರಿಯಿಂದ ಇನ್ನೊಂದು ಕಛೇರಿಗೆ ಅಥವಾ ಕೇಂದ್ರ ಸ್ಥಾನವನ್ನೇ ಬದಲಾಯಿಸಿ ಮಾಡುವ ನೇಮಕಾತಿಯಾಗಿದೆ.
ಸರ್ಕಾರಿ ನೌಕರ ಒಂದು ಸ್ಥಳದಲ್ಲಿರಬಹುದಾದ ಕನಿಷ್ಠ ಅವಧಿ, ಒಂದು ಸ್ಥಳದಲ್ಲಿ ಒಂದು ಹುದ್ದೆಯಲ್ಲಿ ಈ ಸೇವಾವಧಿಯನ್ನು ಪೂರ್ಣಗೊಳಿಸದ ಯಾವುದೇ ಸರ್ಕಾರಿ ನೌಕರನನ್ನು ಸಾಧಾರಣವಾಗಿ ವರ್ಗಾವಣೆ/ ನಿಯೋಜನೆ ಮಾಡುವಂತಿಲ್ಲ ಎಂದು ಹೇಳಿದೆ. ಎಲ್ಲಾ ಗುಂಪು 'ಎ', 'ಬಿ' ಹುದ್ದೆಗಳು 3 ವರ್ಷ. ಗುಂಪು 'ಸಿ' ಹುದ್ದೆಗಳು 4 ವರ್ಷ ಮತ್ತು ಗುಂಪು 'ಡಿ' ಹುದ್ದೆಗಳು 7 ವರ್ಷ ಆಗಿದೆ.












Click it and Unblock the Notifications