7th Pay Commission: 7 ನೇ ವೇತನ ಆಯೋಗ ಕುರಿತು ಸಿಎಂ ಭೇಟಿ ಮಾಡಿದ ಸರ್ಕಾರಿ ನೌಕರರು: ಸಿದ್ದರಾಮಯ್ಯ ಏನಂದ್ರು ಗೊತ್ತಾ?
ಬೆಂಗಳೂರು, ಜೂನ್ 26: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿತ್ತು. ವೇತನ ಹೆಚ್ಚಳದ ಸಂಬಂಧಿತ ಶಿಫಾರಸು ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು. ಇದೀಗ ನೀತಿ ಸಂಹಿತೆ ಮುಕ್ತಾಯದ ಬಳಿಕ ಸರ್ಕಾರ ಮೌನವಾಗಿದ್ದು, ಇಂದು ಸಿಎಂ ಸಿದ್ದರಾಮಯ್ಯ ಅವರನ್ನ ಸರ್ಕಾರಿ ನೌಕರರು ಭೇಟಿ ಮಾಡಿದ್ದಾರೆ.
ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಹಾಗೂ ಮಾಜಿ ಅಧ್ಯಕ್ಷರಾದ ಎಲ್ ಬೈರಪ್ಪ ರವರು ಮಂಗಳವಾರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ, ಏಳನೇ ವೇತನ ಆಯೋಗದ ಶಿಫಾರಸು ವರದಿಯನ್ನು ಶೀಘ್ರ ಜಾರಿಗೊಳಿಸುವಂತೆ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮನವಿ ಮಾಡಿದ್ದಾರೆ.

ಏಳನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು ಸಚಿವ ಸಂಪುಟದ ಸಚಿವರುಗಳು ಅನೌಪಚಾರಿಕವಾಗಿ ಅನುಮತಿ ನೀಡಿರುತ್ತಾರೆ. ಆದಷ್ಟು ಶೀಘ್ರದಲ್ಲೇ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಭರವಸೆ ನೀಡಿದರು. 2024-ನೇ ಸಾಲಿನ ರಾಜ್ಯಮಟ್ಟದ ಕ್ರೀಡಾ ಮತ್ತು ಸಂಸ್ಕೃತಿಕ ಸ್ಪರ್ಧೆಗಳನ್ನು ಆಗಸ್ಟ್ ತಿಂಗಳಲ್ಲಿ ನಡೆಸಲು ಅನುಮತಿ ನೀಡಿದರು. ನಮ್ಮ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಪರವಾಗಿದ್ದು ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಯಾರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿದ ವಿಷಯಗಳು ಇಲ್ಲಿವೆ.
*ದಿನಾಂಕ: 25-02-2024 ರಂದು ರಾಜ್ಯ ಮಟ್ಟದ ಸಮ್ಮೇಳನದ ಸಂದರ್ಭದಲ್ಲಿ 7ನೇ ವೇತನ ಆಯೋಗವು ವರದಿ ನೀಡಿದ ತಕ್ಷಣ ಅನುಷ್ಠಾನಗೊಳಿಸುವ ಭರವಸೆ ನೀಡಿದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
* ದಿನಾಂಕ: 19-11-2022ರಂದು ರಾಜ್ಯ 7ನೇ ವೇತನ ಆಯೋಗವನ್ನು ರಚನೆಯಾಗಿ, ದಿನಾಂಕ: 16-03-2024 ರಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಸುಮಾರು 3 ತಿಂಗಳಾದರೂ ವರದಿಯ ಯಾವುದೇ ಶಿಫಾರಸ್ಸುಗಳನ್ನು ಇದುವರೆವಿಗೂ ಜಾರಿಗೊಳಿಸಿರುವುದಿಲ್ಲ.
* ನಮ್ಮ ಸರ್ಕಾರಿ ನೌಕರರಿಗೆ ದಿನಾಂಕ:01-07-2022ರಿಂದ 7ನೇ ವೇತನ ಆಯೋಗ ಜಾರಿಯಾಗಬೇಕಾಗಿದ್ದು, ಈಗಾಗಲೇ 2 ವರ್ಷ ವಿಳಂಬವಾಗಿದೆ.
* ರಾಜ್ಯ ಸರ್ಕಾರಿ ನೌಕರರ ಜೀವನ ನಿರ್ವಹಣೆ ಕಷ್ಟವಾಗಿರುವುದರಿಂದ ಅದಷ್ಟು ಬೇಗನೆ ರಾಜ್ಯ 7 ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಲಾಯಿತು.
* ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ರಚಿಸಿರುವ ಸಮಿತಿಯ ವರದಿಯನ್ನು ಪಡೆದು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.
* ರಾಜ್ಯ ಸರ್ಕಾರಿ ನೌಕರರು ಹಾಗೂ ಅವಲಂಬಿತರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದ ಬಗ್ಗೆಯು ಸಹ ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಯಿತು.












Click it and Unblock the Notifications