Government Employee; ಸರ್ಕಾರಿ ನೌಕರರ 3 ಬೇಡಿಕೆ, ಸಿಎಂಗೆ ಪತ್ರ
ಹಾಸನ, ಜನವರಿ 19: ಕರ್ನಾಟಕದ ಸರ್ಕಾರಿ ನೌಕರರು ರಾಜ್ಯ ಕಾಂಗ್ರೆಸ್ ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬೇಡಿಕೆಗಳ ಕುರಿತು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ? ಎಂದು ಕಾದು ನೋಡಬೇಕಿದೆ.
ಸರ್ಕಾರಿ ನೌಕರರ ಬೇಡಿಕೆಯ ಕುರಿತು ಜೆಡಿಎಸ್ ನಾಯಕ, ಮಾಜಿ ಸಚಿವ ಎಚ್. ಡಿ. ರೇವಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ. ಗುರುವಾರ ಹೊಳೆನರಸೀಪುರ ತಾಲೂಕು, ಹಾಸನ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ವಿವಿಧ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಚ್. ಡಿ. ರೇವಣ್ಣ ಭೇಟಿ ಮಾಡಿದ್ದರು.

ಅತಿ ಶೀಘ್ರವಾಗಿ 7ನೇ ವೇತನ ಆಯೋಗದ ವರದಿ ಜಾರಿ, ಎನ್‌ಪಿಎಸ್ ರದ್ಧತಿ ಹಾಗೂ ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನೆಯ ಆದೇಶವನ್ನು ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದ್ದರು. ಈ ಭೇಟಿಯ ಬಳಿಕ ಎಚ್. ಡಿ. ರೇವಣ್ಣ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಪತ್ರದ ವಿವರಗಳು; ಮಾಜಿ ಸಚಿವ ಎಚ್. ಡಿ. ರೇವಣ್ಣ ತಮ್ಮ ಪತ್ರದಲ್ಲಿ ನನ್ನ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಹೊಳೆನರಸೀಪುರ ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ/ ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು/ ಕಾರ್ಯಕಾರಿ ಸಮಿತಿ ಸದಸ್ಯರು ಸರ್ಕಾರಿ ಅಧಿಕಾರಿ/ ನೌಕರರು ನನ್ನನ್ನು ಭೇಟಿಯಾಗಿದ್ದರು ಎಂದು ತಿಳಿಸಿದ್ದಾರೆ.
ದಿನಾಂಕ 6/1/2024ರಂದು ಮಂಡ್ಯದಲ್ಲಿ ಯಶಸ್ವಿಯಾಗಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯ ನಡವಳಿಗಳನ್ನು ವಿವರಿಸಿರುತ್ತಾರೆ ಎಂದು ಹೇಳಿದ್ದಾರೆ.
ನೌಕರರ ಸಂಘದ ರಾಜ್ಯ ಸಮಿತಿಯ ಸರ್ವಾನುಮತದ ನಿರ್ಣಯದಂತೆ ರಾಜ್ಯ ಸರ್ಕಾರದಿಂದ ಹೊಳೆನರಸೀಪುರ ತಾಲ್ಲೂಕಿನ ಸಮಸ್ತ ಅಧಿಕಾರಿ/ ನೌಕರರು ಈ ಕೆಳಗೆ ನಮೂದಿಸಿರುವ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ನನಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಎಚ್. ಡಿ. ರೇವಣ್ಣ ವಿವರಣೆ ನೀಡಿದ್ದಾರೆ.
ಬೇಡಿಕೆಗಳು
* ರಾಜ್ಯದ 7ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸುವುದು. ಸರ್ಕಾರವು ರಾಜ್ಯದ 7ನೇ ವೇತನ ಆಯೋಗದಿಂದ ಶೀಘ್ರವಾಗಿ ವರದಿಯನ್ನು ಪಡೆದು ಸರ್ಕಾರ ಈಗಾಗಲೇ ನೀಡಿರುವ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಭತ್ಯೆಯು ಸೇರಿದಂತೆ 40ರಷ್ಟು ಫಿಟ್ ಮೆಂಟ್ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ದಿನಾಂಕ 1/7/2022 ರಿಂದ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸುವುದು.
* ದಿನಾಂಕ 1/4/2006ಕ್ಕಿಂತ ಮೊದಲು ಜಾರಿಯಲ್ಲಿದ್ದ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದು. ರಾಜ್ಯದ ಎನ್‌ಪಿಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್‌ಪಿಎಸ್ ನೌಕರರನ್ನು ಓಪಿಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ್, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕರ್ನಾಟಕ ರಾಜ್ಯದಲ್ಲೂ ಸಹ ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.
* ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು. ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕೂಡಲೇ ಜಾರಿಗೊಳಿಸುವುದು.
ಮೇಲೆ ತಿಳಿಸಿರುವ ರಾಜ್ಯ ಸರ್ಕಾರಿ ನೌಕರರ ಮೂರು ಪ್ರಮುಖ ಬೇಡಿಕೆಗಳು ಈ ಹಿಂದೆ ಸರ್ಕಾರವು ನೀಡಿದ ಆಶ್ವಾಸನೆಗಳಿಗೆ ಪೂರಕವಾಗಿದ್ದು ಅವುಗಳನ್ನು ಜಾರಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದೆ ಎಂದು ಎಚ್. ಡಿ. ರೇವಣ್ಣ ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications