Government employee; ಸರ್ಕಾರಿ ನೌಕರರ ಗಳಿಕೆ ರಜೆ ಸೌಲಭ್ಯ, ಆದೇಶ
ಬೆಂಗಳೂರು, ಡಿಸೆಂಬರ್ 26; ಕರ್ನಾಟಕ ಸರ್ಕಾರ 2024ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯದ ಕುರಿತು ಆದೇಶ ಹೊರಡಿಸಿದೆ. ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಷರತ್ತುಗಳಿಗೆ ಒಳಪಟ್ಟು ಈ ಸೌಲಭ್ಯವನ್ನು ನೀಡಲಾಗುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಅಜಯ್. ಎಸ್. ಕೊರಡೆ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-1) ಈ ಕುರಿತು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಆದೇಶ ಸಂಖ್ಯೆ ದಿನಾಂಕ 17/12/2022 ಉಲ್ಲೇಖ ಮಾಡಿದ್ದಾರೆ.

ಆದೇಶದ ವಿವರಗಳು; ಸರ್ಕಾರಿ ಆದೇಶದಲ್ಲಿ 2023ನೇ ಸಾಲಿನ ಬ್ಲಾಕ್ ಅವಧಿಗೆ ಸರ್ಕಾರಿ ಅಧಿಕಾರಿ ನೌಕರರು ಹಾಗೂ ಸರ್ಕಾರದಿಂದ ಸಹಾಯಾನುದಾನ ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯಲು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ಅನ್ವಯ ಅವಕಾಶ ಕಲ್ಪಿಸಲಾಗಿತ್ತು.
ಸದರಿ ಬ್ಲಾಕ್ ಅವಧಿಯು ದಿನಾಂಕ 31/12/2023ರಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರವು 2024ನೇ ಸಾಲಿನ ಬ್ಲಾಕ್ ಅವಧಿಯಲ್ಲಿ 15 ದಿನ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜೆ ವೇತನಕ್ಕೆ ಸಮಾನವಾಗಿ ನಗದೀಕರಣ ಪಡೆಯುವ ಅವಕಾಶವನ್ನು ಸರ್ಕಾರಿ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಅಧೀನದ ಎಲ್ಲಾ ಸಂಸ್ಥೆಗಳ ಉದ್ಯಮಗಳ ನೌಕರರಿಗೂ ಸಂಬಂಧಿಸಿದ ಸಂಸ್ಥೆ ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ನಿಯತಗೊಳಿಸಲು ಅವಕಾಶವನ್ನು ಕಲ್ಪಿಸಲು ತೀರ್ಮಾನಿಸಿದೆ ಎಂದು ಹೇಳಿದೆ.
2024ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಜಾರಿಗೊಳಿಸಿ ಆದೇಶಿಸಿದೆ.
ಈ ಸೌಲಭ್ಯವು 1/1/2024 ರಿಂದ 31/12/2024ರ ವರೆಗಿನ ಅವಧಿಯವರೆಗೆ ಜಾರಿಯಲ್ಲಿರುತ್ತದೆ. ಈ ಸೌಲಭ್ಯವನ್ನು ಎಲ್ಲಾ ವೃಂದದ ಅರ್ಹ ಸರ್ಕಾರಿ ಅಧಿಕಾರಿ ನೌಕರರು ಒಂದು ತಿಂಗಳ ಮುಂಚಿತವಾಗಿ ಮನವಿ ನೀಡಿ ಅವರ ಇಚ್ಛೆಯ ಯಾವುದೇ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಗೆಜೆಟೆಡ್ ಅಧಿಕಾರಿಗಳ ಸಂಬಂಧದಲ್ಲಿ 2024ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ ಹೆಚ್‌ಆರ್‌ಎಂಎಸ್‌ನಲ್ಲಿ ಲಭ್ಯವಿರುವಂತೆ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮವಹಿಸತಕ್ಕದ್ದು ಮತ್ತು ಮಹಾಲೇಖಪಾಲರು ಲೆಕ್ಕಾಚಾರದ ಬಗ್ಗೆ ಯಾವುದೇ ವ್ಯತ್ಯಾಸವನ್ನು ತಿಳಿಸಿದಲ್ಲಿ ಅದನ್ನು ಸರಿಪಡಿಸುವ ಮತ್ತು ಅದರನ್ವಯದ ಆರ್ಥಿಕ ಸೌಲಭ್ಯಗಳಿಗೆ ಮಾತ್ರ ಅರ್ಹವಾಗುವ ಷರತ್ತಿಗೊಳಪಡಿಸಿ ಮಂಜೂರು ಮಾಡತಕ್ಕದ್ದು.
ಮುಂದುವರೆದು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 118 ರಲ್ಲಿ ನಿಗದಿಪಡಿಸಿರುವ ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರೆ ಷರತ್ತುಗಳು ಅನ್ವಯವಾಗುತ್ತವೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ರಜೆ ಬದಲಾಗಿ ವೇತನ; ಸಾರಿಗೆ ನೌಕರರಿಗೆ ಗಳಿಕೆ ರಜೆ ಬದಲಾಗಿ ವೇತನ ನೀಡಲು ರಾಜ್ಯ ರಸ್ತೆ ಸಾರಿಗೆ ಇಲಾಖೆ ಮುಂದಾಗಿದೆ. 4 ನಿಗಮ ಮಂಡಳಿ ವ್ಯಾಪ್ತಿಯ ಸರ್ಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಿಹಿಸುದ್ದಿ ನೀಡಿದೆ. ಆರ್ಥಿಕ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಈ ಕುರಿತು ನಡಾವಳಿಯನ್ನು ಹೊರಡಿಸಲು ಸೂಚಿಸಲಾಗಿತ್ತು.
ಆರ್ಥಿಕ ಸ್ಥಿತಿಗೊಳಪಟ್ಟು ಗಳಿಕೆ ರಜೆ 15 ದಿನ ಮೀರದಂತೆ ಆದ್ಯತೆಯ ಅನುಸಾರ ವೇತನ ನೀಡಲು ಮುಂದಾಗಿದೆ. ಈ ಸೌಲಭ್ಯ 1/1/2024 ರಿಂದ 31/12/2024ರ ವರೆಗೆ ಇರಲಿದೆ ಎಂಬ ತೀರ್ಮಾನ ಕೈಗೊಂಡಿದೆ.












Click it and Unblock the Notifications