Property: ಗ್ರಾಮೀಣ ಭಾಗದ ಆಸ್ತಿದಾರರಿಗೆ ಗುಡ್‌ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ: ಈ ಆಸ್ತಿಗಳಿಗೆ ಒಸಿಯಿಂದ ವಿನಾಯಿತಿ
ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳ ತೋಟದ ಮನೆ ಮಾಲೀಕರು ಮತ್ತು ಹೊಸದಾಗಿ ನಿರ್ಮಿಸಲಾದ ಆಸ್ತಿ ಮಾಲೀಕರಿಗೆ ಪ್ರಮುಖ ಪರಿಹಾರ ಸಿಕ್ಕಂತಾಗಿದೆ. ಸರ್ಕಾರ ಬುಧವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿರ್ದಿಷ್ಟ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ.
ಗ್ರಾಮೀಣ ಭಾಗದ ಕೆಲವು ನಿರ್ದಿಷ್ಟ ಆಸ್ತಿಗಳಿಗೆ ಸಂಬಂಧಿಸಿದಂತೆ ಆಕ್ಯುಪೆನ್ಸಿ ಪ್ರಮಾಣಪತ್ರ (Occupancy Certificate - OC) ಪಡೆಯುವುದರಿಂದ ವಿನಾಯಿತಿ ನೀಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ನಿಟ್ಟಿನಲ್ಲಿ ಮಹತ್ವದ ಅಪ್ಡೇಟ್ಸ್ ನೀಡಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶಗಳಲ್ಲಿ 30x40 ಚದರ ಅಡಿ ಪ್ಲಾಟ್‌ಗಳಲ್ಲಿ ಹೊಸದಾಗಿ ನಿರ್ಮಿಸಲಾದ ವಸತಿ ಕಟ್ಟಡಗಳಿಗೆ ಈ ವಿನಾಯಿತಿ ಅನ್ವಯಿಸಲಿದೆ. ಇನ್ನು ಈ ವಿನಾಯಿತಿಯು ಶೀಘ್ರ ಜಾರಿಗೆ ಬರಲಿದೆ.

ಆದೇಶದಲ್ಲಿ ಏನಿದೆ
ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸರ್ಕಾರವು ಆಸ್ತಿ ವಿಚಾರಕ್ಕೆ ಸಂಬಂಧಿ ಹೊಸ ವಿಶೇಷ ಅಪ್ಡೇಟ್ಸ್‌ಗಳನ್ನು ಕೊಡುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆದೇಶದ ಪ್ರಕಾರ, ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಪ್ರದೇಶಗಳಲ್ಲಿ 30x40 ಚದರ ಅಡಿ ಪ್ಲಾಟ್‌ನಲ್ಲಿ ನಿರ್ಮಿಸಲಾದ ನೆಲಮಹಡಿ +2 ಮಹಡಿಗಳು (G+2) ಅಥವಾ ಸ್ಟಿಲ್ಟ್ + 3 ಮಹಡಿಗಳು (ಸ್ಟಿಲ್ಟ್ ಎಂದರೆ ನೆಲ ಹಂತಸ್ತು +3) ಒಳಗೊಂಡಿರುವ ಯಾವುದೇ ವಸತಿ ಕಟ್ಟಡಗಳನ್ನು ಅಧಿಕಾರಿಗಳಿಂದ ಪೂರ್ವಾನುಮತಿ ಅಥವಾ ಯೋಜನಾ ಅನುಮೋದನೆ ಇಲ್ಲದೆ ನಿರ್ಮಾಣವನ್ನು ನಡೆಸಲಾಗಿದ್ದರೂ ಸಹ, ಕಡ್ಡಾಯ ಆಕ್ಯುಪೆನ್ಸಿ ಪ್ರಮಾಣಪತ್ರವನ್ನು ಪಡೆಯುವುದರಿಂದ ವಿನಾಯಿತಿ ಇರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಕರ್ನಾಟಕದಲ್ಲಿ ಈ ಆಸ್ತಿಗಳಿಗೆ ಒಸಿಯಿಂದ ವಿನಾಯಿತಿ ನೀಡಿರುವುದು ಭಾರೀ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟಡಗಳಿಗೆ OC ನೀಡುವ ಮೊದಲು ವಿವರವಾದ ತಪಾಸಣೆ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಇದರಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಆ ನಿರ್ದಿಷ್ಟ ಪ್ರದೇಶದ ಯೋಜನಾ ಅಧಿಕಾರಿಗಳು ಭೇಟಿ ನೀಡುವುದು, ಮಾನ್ಯತೆ ಪಡೆದ ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳು ನೀಡಿದ ಪ್ರಮಾಣಪತ್ರಗಳ ಪರಿಶೀಲನೆ ಮತ್ತು ಯೋಜನಾ ಅನುಮೋದನೆಗಳ ಪರಿಶೀಲನೆ ಪ್ರಕ್ರಿಯೆಗಳು ಒಳಪಟ್ಟಿದ್ದವು.
ಆದಾಗ್ಯೂ, ಈ ಕೆಲಸಗಳು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಕೆಲಸದ ಹೊರೆಯನ್ನು ಹೆಚ್ಚಿಸುತ್ತಿವೆ ಎಂದು ಹೇಳಲಾಗಿದ್ದು. ಹೀಗಾಗಿ, ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. 30x40 ಚದರ ಅಡಿ ಪ್ಲಾಟ್‌ಗಳಲ್ಲಿ ನಿರ್ಮಿಸಲಾದ ವಸತಿ ಕಟ್ಟಡಗಳಿಗೆ ಒಸಿಗಳನ್ನು ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
ಆಸ್ತಿದಾರರ ಸಮಸ್ಯೆಗೆ ಮುಕ್ತಿ
ಇನ್ನು ಒಸಿ ಇಲ್ಲದೆ ಇರುವುದು ಅಥವಾ ಸಕಾಲದಲ್ಲಿ ಒಸಿ ಸಿಗದೆ ಆಸ್ತಿದಾರರು ವಿದ್ಯುತ್ ಮತ್ತು ನೀರು ಸರಬರಾಜು ಸೇರಿದಂತೆ ಕೆಲವೊಂದು ಪ್ರಮುಖ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್‌ಗಳು) ಮತ್ತು ಸ್ಥಳೀಯ ಸಂಸ್ಥೆಗಳು ವಿದ್ಯುತ್, ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕಗಳಂತಹ ಅಗತ್ಯ ಸೇವೆಗಳನ್ನು ಒದಗಿಸಲು ನಿರಾಕರಿಸುತ್ತಿರುವುದರಿಂದ ಒಸಿ ಇಲ್ಲದಿರುವುದು ಆಸ್ತಿ ಮಾಲೀಕರಿಗೆ ಪ್ರಮುಖ ತೊಡಕಾಗಿತ್ತು.
ಬೆಂಗಳೂರು ಸೇರಿದಂತೆ ಕರ್ನಾಟಕದ ಆಸ್ತಿಗಳಿಗೆ ಅನ್ವಯ
ಇನ್ನು ಇದೀಗ ಒಸಿ ವಿನಾಯಿತಿಯು ಬೆಂಗಳೂರು ಸೇರಿದಂತೆ ಕರ್ನಾಟಕದ ಆಸ್ತಿಗಳಿಗೆ ಅನ್ವಯಿಸುತ್ತಿದೆ. ಈಚೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಇತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲಾದ ಆಸ್ತಿಗಳಿಗೆ ಕಡ್ಡಾಯ ಒಸಿಯಿಂದ ವಿನಾಯಿತಿ ನೀಡಲಾಗಿತ್ತು.












Click it and Unblock the Notifications