ಗಿರೀಶ್ ಕಾರ್ನಾಡ್ ಅವರಿಗೆ ಜೀವ ಬೆದರಿಕೆ ಸಂದೇಶ
ಬೆಂಗಳೂರು, ನವೆಂಬರ್ 12 : 'ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು' ಎಂದು ಹೇಳಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ತಾವು ನೀಡಿರುವ ಹೇಳಿಕೆ ಬಗ್ಗೆ ಈಗಾಗಲೇ ಕಾರ್ನಾಡ್ ಕ್ಷಮೆ ಯಾಚನೆ ಮಾಡಿದ್ದಾರೆ.
Intolerant Chandra ಎಂಬ ಟ್ವಿಟರ್ ಅಕೌಂಟ್‌ನಿಂದ ಕಾರ್ನಾಡ್ ಅವರಿಗೆ ಜೀವ ಬೆದರಿಕೆ ಸಂದೇಶ ಕಳಿಸಲಾಗಿದೆ. ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರಂತಯೇ ಗಿರೀಶ್ ಕಾರ್ನಾಡ್ ಸಾವು ಬರುತ್ತದೆ ಎಂದು ಬೆದರಿಕೆ ಹಾಕಲಾಗಿದೆ. [ಕ್ಷಮೆ ಯಾಚಿಸಿದ ಗಿರೀಶ್ ಕಾರ್ನಾಡ್]

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಒತ್ತಾಯ ಮಾಡಿದರೆ, ಎಂ.ಎಂ.ಕಲಬುರ್ಗಿ ಅವರಂತೆಯೇ ಸಾವು ಕಾಣ ಬೇಕಾಗುತ್ತದೆ ಎಂಬುದು ಟ್ವಿಟ್ ಸಾರಾಂಶವಾಗಿದೆ. ಈ ಟ್ವಿಟ್ ಮಾಡಿದ ಕೆಲವೇ ಕ್ಷಣದಲ್ಲಿ ಅದನ್ನು ಡಿಲೀಟ್ ಮಾಡಲಾಗಿದೆ. [ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ : ಕಾರ್ನಾಡ್]
ಗಿರೀಶ್ ಕಾರ್ನಾಡ್ ಅವರಿಗೆ ಜೀವ ಬೆದರಿಕೆ ಹಾಕಿರುವುದು ತಿಳಿದುಬಂದಿದೆ. ಇದನ್ನು ಪರಿಶೀಲಿಸುತ್ತಿದ್ದೇವೆ. ಅವರು ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. [ಕಾರ್ನಾಡ್ ಹೇಳಿಕೆಗೆ ವ್ಯಾಪಕ ವಿರೋಧ: ಅವರೊಬ್ಬ ತಲೆತಿರುಕ ಸಾಹಿತಿ]
ಕಾರ್ನಾಡ್ ಏನು ಹೇಳಿದ್ದರು? : ನವೆಂಬರ್ 10ರ ಮಂಗಳವಾರ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಿರೀಶ್ ಕಾರ್ನಾಡ್ ಅವರು, 'ಕೆಂಪೇಗೌಡರು ಬೆಂಗಳೂರನ್ನು ಕಟ್ಟಿರಬಹುದು. ಆದರೆ, ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ. ಆದ್ದರಿಂದ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಬೇಕು' ಎಂದು ಹೇಳಿದ್ದರು.

ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು, ವಿವಿಧ ಜಿಲ್ಲೆಗಳಲ್ಲಿ ಕಾರ್ನಾಡ್ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. 'ತಾವು ದುರುದ್ದೇಶದಿಂದ ಈ ಹೇಳಿಕೆ ನೀಡಿರಲಿಲ್ಲ. ನಾನು ನೀಡಿರುವ ಹೇಳಿಕೆಯಿಂದಾಗಿ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ' ಎಂದು ಕಾರ್ನಾಡ್ ಬುಧವಾರ ಕ್ಷಮೆ ಕೇಳಿದ್ದರು.
ಎಂ.ಎಂ.ಕಲಬುರ್ಗಿ ಹತ್ಯೆ : ಧಾರವಾಡದ ಕಲ್ಯಾಣ ನಗರದಲ್ಲಿನ ಎಂ.ಎಂ.ಕಲಬುರ್ಗಿ ಅವರ ನಿವಾಸದಲ್ಲಿ 2015ರ ಆಗಸ್ಟ್ 30ರ ಬೆಳಗ್ಗೆ 8.40ರ ಸುಮಾರಿಗೆ ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಲಾಗಿತ್ತು. [ಕಲಬುರ್ಗಿ ಹತ್ಯೆಯಾಗಿ 2 ತಿಂಗಳು : ಎತ್ತ ಸಾಗಿದೆ ತನಿಖೆ?]












Click it and Unblock the Notifications