ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಪೊಲೀಸ್ ಇಲಾಖೆಯಿಂದ ಮಹತ್ವದ ಸಭೆ !
ಕರ್ನಾಟಕದ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎನ್ನುವ ಕುಖ್ಯಾತಿ ಪಾತ್ರವಾಗಿರುವ ಹುಬ್ಬಳ್ಳಿ- ಧಾರವಾಡದ ಈದ್ಗಾ ಮೈದಾನ ಇದೀಗ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ಬಾರಿಯೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ಬಗ್ಗೆ ಪರ - ವಿರೋಧ ವ್ಯಕ್ತವಾಗಿದೆ.
ಪ್ರತಿ ಬಾರಿ ಗಣೇಶೋತ್ಸವ ಪ್ರಾರಂಭವಾದ ಸಂದರ್ಭದಲ್ಲಿಯೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಚರ್ಚೆಯಾಗುವುದರೊಂದಿಗೆ, ವಿವಾದದ ಕೇಂದ್ರ ಬಿಂದುವಾಗುತ್ತದೆ.

ಈಗಾಗಲೇ ಹುಬ್ಬಳ್ಳಿಯ ಈದ್ಗಾ ಮೈದಾನದ ಕರಾಳತೆ ಹಾಗೂ ಸಾವು - ನೋವಿಗೆ ಸಾಕ್ಷಿಯಾದ ಸ್ಥಳವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ವಿಚಾರವು ಪರ - ವಿರೋಧಕ್ಕೆ ಕಾರಣವಾಗುತ್ತಿದೆ.
ಎಡಿಜಿಪಿಗಳ ಸರಣಿ ಸಭೆ
ಈಗಾಗಲೇ ಸೂಕ್ಷ್ಮ ಪ್ರದೇಶ ಎಂದು ಹುಬ್ಬಳ್ಳಿ - ಧಾರವಾಡ ಪ್ರದೇಶವನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಕೋಮುಸೌಹಾರ್ದತೆಗೆ ಅಪಖ್ಯಾತಿಯನ್ನು ಮೂಡಿಸುವ ಘಟನೆಗಳು ನಡೆಯುತ್ತಿರುತ್ತವೆ. ಈಗಷ್ಟೇ ಹುಬ್ಬಳ್ಳಿ - ಧಾರವಾಡದ ಪರಿಸ್ಥಿತಿ ತಿಳಿಯಾಗಿದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಈ ಭಾಗದಲ್ಲಿ ನಡೆದಿದ್ದ ಕೊಲೆ ಪ್ರಕರಣಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ನೇಹಾ- ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೇ ಗಲಭೆಗಳು ಸಹ ನಡೆದಿದ್ದು, ಕಾನೂನು - ಸುವ್ಯವಸ್ಥೆಗೆ ಆದ್ಯತೆ ನೀಡಬೇಕು ಎನ್ನುವ ಆಗ್ರಹ ಕೇಳಿಬಂದಿತ್ತು. ಪೊಲೀಸ್ ಆಯುಕ್ತರ ಬದಲಾವಣೆಯೂ ಆಗಿದೆ.
ಇದೀಗ ಮೇಲ್ಸೇತುವೆ ಕಾಮಗಾರಿಗೆ ಇರುವ ಕಾಂಪೌಂಡ್ ಭಾಗಶಃ ತೆರವು, ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಕ್ರಮ ತೆಗೆದುಕೊಳ್ಳಬೇಕಿದೆ. ಹೀಗಾಗಿ, ಕಾನೂನು ಮತ್ತು ಸುವ್ಯಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಮತ್ತು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಬುಧವಾರ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ನವನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸರಣಿ ಸಭೆ ನಡೆಸಿದ್ದಾರೆ.
ಅಲೋಕ್ ಕುಮಾರ್ ಅವರು ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು
ಆರ್. ಹಿತೇಂದ್ರ ಅವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ಮುಂಜಾಗ್ರತಾ ಸಭೆ ನಡೆಸಲಿದ್ದಾರೆ.
20ಕ್ಕೂ ಹೆಚ್ಚು ಸಂಘಟನೆಗಳಿಂದ ವಿರೋಧ
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂದು ಆಗ್ರಹಿಸಿ, ಕಳೆದ ವರ್ಷ ಹುಬ್ಬಳ್ಳಿ ಅಂಜುಮನ್ ಸಂಸ್ಥೆ, ಎಐಎಂಐಎಂ ಹಾಗೂ ಎಸ್‌ಡಿಪಿಐ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಹುಬ್ಬಳ್ಳಿ- ಧಾರವಾಡ ಪಾಲಿಕೆಗೆ ಮನವಿ ಸಲ್ಲಿಸಿದ್ದವು.
ಅವಕಾಶ ಕೋರಿದ್ದ 4 ಸಮಿತಿಗಳು
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬಾರದು ಎಂದು 20ಕ್ಕೂ ಹೆಚ್ಚು ಸಂಘಟನೆಗಳು ಆಗ್ರಹಿಸಿದ್ದವು. ಇದೇ ಸಂದರ್ಭದಲ್ಲಿ ನಾಲ್ಕು ಸಮಿತಿಗಳು ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದವು.
ಪ್ರಮೋದ್ ಮುತಾಲಿಕ್ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿ - ಧಾರವಾಡ ಪಾಲಿಕೆ ಆಯುಕ್ತರ ಕಚೇರಿಯ ಮುಂದೆ ಎರಡು ದಿನ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ತೀವ್ರ ಪರ-ವಿರೋಧದ ಚರ್ಚೆಗಳ ನಡುವೆ ಎರಡು ದಿನದ ಉತ್ಸವಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಉತ್ಸವವು ಪೊಲೀಸ್ ಸರ್ಪಗಾವಲಿನಲ್ಲಿ ನಡೆದಿತ್ತು.
ಇತ್ತೀಚೆಗೆ ನಡೆದ ಘಟನೆಗಳು
ಹುಬ್ಬಳ್ಳಿ - ಧಾರವಾಡದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯವೇ ಬೆಚ್ಚಿ ಬೀಳುವ ಪ್ರಕರಣಗಳು ನಡೆದಿದ್ದವು. ವಿದ್ಯಾರ್ಥಿನಿ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಅವರ ಕೊಲೆ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಇವು ಲವ್ ಜಿಹಾದ್ ಕೊಲೆಗಳು ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಕೋಮುಗಲಭೆಯೂ ನಡೆದಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸ್ ಇಲಾಖೆ ಹೆಚ್ಚು ಮುಂಜಾಗ್ರತೆ ವಹಿಸುತ್ತಿದೆ.












Click it and Unblock the Notifications