ದಿನೇಶ್ ಗುಂಡೂರಾವ್ ಕ್ಷೇತ್ರದಲ್ಲಿ ಕೋಟಿ ಕೋಟಿ ಅವ್ಯವಹಾರ: ಬಿಜೆಪಿ ವಾಗ್ದಾಳಿ
ಬೆಂಗಳೂರು, ಫೆಬ್ರವರಿ 07: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಸದ ವಿಲೇವಾರಿ ಕುರಿತು ನಕಲಿ ಬಿಲ್ ಬಗ್ಗೆ, ಸಂಬಂಧಿಸಿ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಮಾಹಿತಿ ಗೊತ್ತೇ ಇಲ್ಲವೆಂದರೆ ಅದನ್ನು ನಂಬುವುದು ಹೇಗೆ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್, ಸಚಿವ ದಿನೇಶ್ ಗುಂಡೂರಾವ್ ಅವರನ್ನು ಹಾಗೂ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 3 ವರ್ಷಗಳಿಂದ ಕಸದ ಗುತ್ತಿಗೆಯಲ್ಲಿ 2 ಕೋಟಿ 37 ಲಕ್ಷ ನಕಲಿ ಬಿಲ್ ಮಾಡಿ ಹಣ ಪಡೆದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಇದೇನೂ ಸಣ್ಣ ಮೊತ್ತವಲ್ಲ. ಶಾಸಕರ ಗಮನಕ್ಕೆ ಬರದೇ ಯಾವುದೇ ಬಿಲ್ ಪಾವತಿ ಆಗುವುದಿಲ್ಲ ಎಂದು ಹೇಳಿದರು.

ತಮ್ಮ ಕ್ಷೇತ್ರದಲ್ಲಿ ಕಸ ವಿಲೇವಾರಿ ಆಗುತ್ತಿದೆಯೇ? ಸಮರ್ಪಕವಾಗಿ ಆಗುತ್ತಿದೆಯೇ? ಜನರಿಗೆ ಅನುಕೂಲಕರ ಆಗುತ್ತಿದೆಯೇ ಎಂಬುದಕ್ಕೆ ಗಮನ ಕೊಡದೇ ಇವರು ಕರ್ತವ್ಯದಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ರಾಜ್ಯ ಸರ್ಕಾರ ಬಿಬಿಎಂಪಿ ವಿಶೇಷ ಕಮಿಷನರ್ ವಿಕಾಸ್ ಕಿಶೋರ್ ಎಂಬುವರನ್ನು ತನಿಖೆಗೆ ನೇಮಿಸಿದೆ. ಅಧಿಕಾರಿಗಳು ಕೈಜೋಡಿಸದೇ ಗುತ್ತಿಗೆದಾರ ಈ ಮೊತ್ತ ಪಡೆಯಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ವಿವರಿಸಿದರು.
ಎಲ್ಲಾ ಸೇರಿ 2 ಕೋಟಿ ನುಂಗಿ ಹಾಕಿದಂತಿದೆ. ತನಿಖೆ ಮಾಡಿದರೆ ಅದೆಷ್ಟು ಕೋಟಿ ಆಚೆ ಬರುತ್ತದೋ ಗೊತ್ತಿಲ್ಲ ಎಂದ ಅವರು, ಇತ್ತೀಚಿಗೆ ಗೇಟ್ ಬಿದ್ದು ಮಗು ಸತ್ತು ಹೋಗಿತ್ತು. ಕಳಪೆ ಕಾಮಗಾರಿಯಿಂದ ಹೀಗಾಗಿದೆ. ಗುತ್ತಿಗೆದಾರರ ಮೇಲೆ ಕೊಲೆ ಕೇಸ್ ಹಾಕಿಲ್ಲ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಅಧ್ಯಕ್ಷತೆಯಿಂದ ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ದಿನೇಶ್ ಗುಂಡೂರಾವ್ ಅವರ ಆರೋಗ್ಯ ಇಲಾಖೆಯಲ್ಲೂ ಅದೇ ನಡೆದಿದೆ. ದಿನನಿತ್ಯ ಬಾಣಂತಿಯರ ಸಾವು ಸಂಭವಿಸುತ್ತಿದೆ. ಬೇರೆಯವರನ್ನು ಟೀಕಿಸುವುದಕ್ಕೇ ಇವರು ಸೀಮಿತವಾಗಿದ್ದಾರೆ. ತಮ್ಮ ಮೂಗಿನಡಿ ನಡೆಯುವ ಅವ್ಯವಹಾರಗಳನ್ನು ಕೂಡ ದಿನೇಶ್ ಗುಂಡೂರಾವ್ ಅವರು ಗಮನಿಸದೇ ಇರುವುದು ಬಹಳ ಶೋಚನೀಯ ಎಂದು ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ್ ನಾರಾಯಣ್, ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ, ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್ ಅವರು ಭಾಗವಹಿಸಿದ್ದರು.












Click it and Unblock the Notifications