ಬಸ್ ನಲ್ಲಿ ಉಚಿತ ಪ್ರಯಾಣ; ಮಹಿಳೆಯರು ಲಗೇಜ್ ಚಾರ್ಜ್ ಕೊಡಬೇಕಾ? ಇಲ್ಲಿದೆ ಮಾಹಿತಿ
ಬೆಂಗಳೂರು, ಜೂನ್ 13: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಕಾರಣವಾಗಿದ್ದ ಪಂಚ ಗ್ಯಾರಂಟಿಗಳ ಘೋಷಣೆ ಜಾರಿಗೆ ಸರ್ಕಾರ ಮುಂದಾಗಿದ್ದು, ಭಾನುವಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದ್ದು, ಇದೀಗ ಉಚಿತ ಲಗೇಜ್ ಸಾಗಣಿಗೂ ಹಲವು ಮಹಿಳಾ ಪ್ರಯಾಣಿಕರು ಪಟ್ಟು ಹಿಡಿದಿದ್ದಾರೆ.
ಹೌದು, ರಾಜ್ಯ ಸರ್ಕಾರ ಕರ್ನಾಟಕದ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದ ಬಳಿಕ ಉಚಿತ ಲಗೇಜ್ ಸಾಗಣಿಗೂ ಅವಕಾಶವನ್ನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇನ್ನೂ ನಮಗೆ ಉಚಿತ ಪ್ರಯಾಣಕ್ಕೆ ಅವಕಾಶವನ್ನ ಕಲ್ಪಿಸಿದ್ದಿರಾ. ನಮ್ಮ ಲಗೇಜ್ ಗೂ ಅವಕಾಶವನ್ನ ನೀಡಿ ಎಂದು ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಿವೆ.

ಇನ್ನೂ ಈ ವಾದ ವಿವಾದವನ್ನ ಗಮನಿಸಿರುವ ಕೆಎಸ್‌ಆರ್‌ಟಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದೆ. ಒಬ್ಬ ಪ್ರಯಾಣಿಕ 30 ಕೆಜಿ ವರೆಗೂ ಲಗೇಜ್ ಉಚಿತ ಸಾಗಣೆ ಮಾಡಬಹುದು. ಅದಕ್ಕಿಂತ ಹೆಚ್ಚಿನ ತೂಕದ ಲಗೇಜ್ ಇದ್ದರೆ ಮೇಲಿನ ತೂಕಕ್ಕೆ ತಲಾ ಒಂದು ಕೆಜಿಗೆ ಇಂತಿಷ್ಟು ಎಂದು ಹಣ ಪಾವತಿಸಬೇಕಾಗುತ್ತದೆ ಎಂದು ಮಾಹಿತಿಯನ್ನ ನೀಡಿದೆ.
ಈಗಾಗಲೇ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ ಎಂಬ ಕಾರಣಕ್ಕೆ ತಮ್ಮ ಲಗೇಜ್‌ಗೂ ಉಚಿತವಿಲ್ಲ. 30 ಕೆ.ಜಿ ಮೇಲೆ ಲಗೇಜ್ ಕೊಂಡೊಯ್ಯುತ್ತಿದ್ದರೆ ಕಡ್ಡಾಯವಾಗಿ ಪ್ರತಿ ಕೆಜಿಗೆ ಇಂತಿಷ್ಟು ಎಂದು ದರವನ್ನು ಮಹಿಳಾ ಪ್ರಕಾಣಿಕರು ಪಾವತಿಸಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಲಗೇಜ್ ಗಳನ್ನ ಯಾವುದೇ ಕಾರಣಕ್ಕೂ ಸೀಟ್‌ಗಳ ಮೇಲೆ ಇಡುವಂತಿಲ್ಲ ಎಂದು ತಿಳಿಸಿದೆ. ಬಸ್ ಚಲಿಸುವ ಪ್ರತಿ ಹಂತಕ್ಕೆ (ಸ್ಟೇಜ್) ಒಂದು ಯೂನಿಟ್‌ಗೆ 75 ಪೈಸೆ ದರವಿದೆ. ಕನಿಷ್ಠ 5 ರೂಪಾಯಿ ಲಗೇಜ್ ದರ ವಿಧಸಲಾಗುತ್ತದೆ. ಲಗೇಜ್ ಅನ್ನು ಯೂನಿಟ್‌ನಲ್ಲಿ (10 ಕೆಜಿ ಅಥವಾ ಲಗೇಜ್ ಮಾದರಿ ಆಧರಿಸಿ ಇಂತಿಷ್ಟು ಕೆಜಿಗೆ ಒಂದು ಯೂನಿಟ್) ಪರಿಗಣಿಸಿ ದರ ವಿಧಿಸಲಾಗುತ್ತದೆ.
ಪ್ರಯಾಣಿಕರು ತಮ್ಮ ಲಗೇಜ್ ಅನ್ನು ಬಸ್‌ನ ಟಾಪ್ ಅಥವಾ ಲಗೇಜ್ ಡಿಕ್ಕಿಯಲ್ಲಿ ಹಾಕಬೇಕು. ತಮ್ಮ ಪಕ್ಕದ ಸೀಟ್, ಬಸ್ ಡ್ರೈವರ್ ಪಕ್ಕ ಅಥವಾ ಇಂಜಿನ್ ಪಕ್ಕ ಇಟ್ಟುಕೊಳ್ಳಬಾರದು. ಲಗೇಜ್‌ನಿಂದ ಸಹ ಪ್ರಯಾಣಿಕರಿಗೆ ಅಥವಾ ಡ್ರೈವರ್, ಕಂಡಕ್ಟರ್‌ಗಳಿಗೆ ಸಮಸ್ಯೆಯಾಗಬಾರದು ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೂ ವಾಣಿಜ್ಯ ವಸ್ತುಗಳಿಗೆ ಲಗೇಜ್ ಶುಲ್ಕ ಅನ್ವಯಿಸುತ್ತದೆ. ಬಸ್ಸಿನಲ್ಲಿ ತೆಗೆದುಕೊಂಡು ಹೋಗುವ ಲಗೇಜ್‍ಗೆ ಮೊದಲ ಸ್ಥಳದಲ್ಲಿಯೇ ದರ ವಿಧಿಸದೇ ಲಗೇಜ್ ಚೀಟಿಯನ್ನು ಪಡೆಯದಿದ್ದಲ್ಲಿ, ನಿರ್ದಿಷ್ಟ ಲಗೇಜ್‍ನ ದರದ ಎರಡು ಪಟ್ಟು ದಂಡವನ್ನು ಪ್ರಯಾಣಿಕರಿಗೆ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.












Click it and Unblock the Notifications