ಸಿದ್ದರಾಮಯ್ಯ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆಗಳನ್ನ ಕೇಳಿದ ಸಾಮ್ರಾಟ್; ಉತ್ತರ ಕೊಡ್ತಾರಾ ಸಿಎಂ?
ಬೆಂಗಳೂರು, ಆಗಸ್ಟ್ 10: ಭ್ರಷ್ಟಾಚಾರ ಕೇಸಿನಲ್ಲಿ ಜಾಮೀನಿನಲ್ಲಿ ಇರುವವರು ನೀವಲ್ಲವೇ? ನೀವು ಸತ್ಯ ಹರಿಶ್ಚಂದ್ರನಂತೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಎಂದು ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಎರಡು ತಿಂಗಳಿಂದ ನಿವೇಶನದ ಒಂದು ಪ್ಲಾನ್‍ಗೆ ಕೂಡ ಒಪ್ಪಿಗೆ ಸಿಗುತ್ತಿಲ್ಲ. ನಿವೇಶನದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡದೆ ಇರುವುದರ ಗೂಡಾರ್ಥ ಏನು? ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರಾ? 26 ಕಂಡಿಷನ್ ಹಾಕಿದ್ದಾರೆ. ನನ್ನ ಪ್ರಕಾರ ಇದಕ್ಕೆ 26 ವರ್ಷ ಬೇಕೇನೋ? ದಾಖಲೆ ಪಡೆದು ಕೊಡಲು ಕನಿಷ್ಠ ನಾಲ್ಕೈದು ವರ್ಷ ಬೇಕಾದೀತು ಎಂದು ತಿಳಿಸಿದರು. ಕಳೆ ಕಿತ್ತ ಮಾಹಿತಿಯನ್ನೂ ಕೋರಿದ್ದಾರೆ ಎಂದು ಟೀಕಿಸಿದರು.

ಪಾಲಿಕೆಗಳಲ್ಲಿ ವರ್ಗಾವಣೆ ಮಾಡಬೇಕಾದರೆ, ನನ್ನ ಗಮನಕ್ಕೆ ತರದೆ ಮಾಡಬಾರದೆಂದು ಪತ್ರ ಬರೆದಿದ್ದಾರೆ. ನಾನು ಕೂಡ 4 ಸಾರಿ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ಯಾವತ್ತೂ ಕೂಡ ಇಂಥ ಒಂದು ಪತ್ರವನ್ನೂ ಬರೆದಿಲ್ಲ. ಬಿಲ್ ಎಲ್ಲವನ್ನೂ ಪಾವತಿಸದೆ ನಿಲ್ಲಿಸಲು ನಾನು ಯಾವತ್ತೂ ಹೇಳಿರಲಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಕೇಳಿದ ಹನ್ನೊಂದು ಪ್ರಶ್ನೆಗಳು ಇಲ್ಲಿವೆ!
1. ನಮ್ಮ ಮೇಲೆ 40% ಅಂತ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ, ಈಗ ನಿಮ್ಮ ಮೇಲೆ 15% ಕಮಿಷನ್ ಆರೋಪ ಮಾಡಿದ್ದಾರೆ. ಇದಕ್ಕೆ ನಿಮ್ಮ ಉತ್ತರವೇನು?
2. ನೀವು ಕಮಿಷನ್ ಕೇಳಿಲ್ಲ ಎಂದು ಹೇಳುತ್ತೀರಿ. ಗುತ್ತಿಗೆದಾರರು ಅಜ್ಜಯ್ಯನ ದೇವಸ್ಥಾನಕ್ಕೆ ಹೋಗಿ ಆಣೆ ಮಾಡಿ ಹೇಳಿ ಎಂದು ಹೇಳುತ್ತಾರೆ. ಈ ಸವಾಲನ್ನು ಯಾಕೆ ಒಪ್ಪಿಕೊಂಡಿಲ್ಲ?
3. ಕಮಿಷನ್ ದಂಧೆ ಶುರು ಮಾಡಿರೋದು ಲೋಕಸಭೆ ಚುನಾವಣೆಗೆ ಫಂಡ್ ಸಂಗ್ರಹಕ್ಕಾಗಿಯೇ?
4. ಗುತ್ತಿಗೆದಾರರ ಹಿತಾಸಕ್ತಿ ಕಾಪಾಡುವುದಾಗಿ ವಾಗ್ದಾನ ಮಾಡಿ ಅಧಿಕಾರ ಹಿಡಿದ ನೀವು, ಈಗ ಅವರನ್ನು ಕಡೆಗಣಿಸುತ್ತಿರುವುದು ಎಷ್ಟು ಸರಿ?
5. ಬಿಬಿಎಂಪಿಯಲ್ಲಿ 2019-2023 ರವರೆಗೆ ನಡೆದಿರುವ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡ್ತಿದ್ದೀರಿ, ನೀವು ಪ್ರಾಮಾಣಿಕರಾಗಿದ್ದರೆ 2013 ರಿಂದಲೂ ತನಿಖೆ ಮಾಡಬಹುದಲ್ಲಾ?
6. ಗುತ್ತಿಗೆದಾರರೆಲ್ಲರೂ ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆಸ್ ಬಳುವಳಿಗರ ಇವರು?
7. ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದರೆ ನಿಮ್ಮ ಬ್ರಾಂಡ್ ಬೆಂಗಳೂರಿನ ಕಥೆ ಏನು?
8. 300 ಜನ ಗುತ್ತಿಗೆದಾರರು ದಯಾ ಮರಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಇದಕ್ಕೆ ಕಾಂಗ್ರೆಸ್ ಉತ್ತರವೇನು?
9. ದೆಹಲಿಯಲ್ಲಿ ಮಂತ್ರಿಗಳ ಕರೆಸಿ ಸಭೆ ಮಾಡಿದ್ದು ಲೋಕಸಭಾ ಸೀಟ್ ಗೆಲ್ಲಿಸುವುದಕ್ಕೋ ಅಥವಾ ಸೂಟ್‌ಕೇಸ್ ತುಂಬಿಸುವುದಕ್ಕೋ?
10. ಮಾನ್ಯ ಡಿ.ಕೆ. ಶಿವಕುಮಾರ್ ಅವರೇ ನಿಮ್ಮದು ಬ್ರಾಂಡ್ ಬೆಂಗಳೂರೋ ಅಥವಾ ಬ್ಲಾಕ್ ಬೆಂಗಳೂರೋ?
II. ಸಿಎಂ ಹಣ ಬಿಡುಗಡೆ ಮಾಡಿದ್ರೆ, ಡಿಸಿಎಂ ತಡೆ ಹಿಡಿದಿದ್ದಾರೆ. ಹಾಗಾದ್ರೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ವೇಣುಗೋಪಾಲ್ ಸೂಚನೆ ನೀಡಿದರೆ, ಸುರ್ಜೆವಾಲ ತಡೆ ನೀಡಲು ಸೂಚನೆ ನೀಡಿದ್ರಾ? ಎಂದು ಸರಣಿ ಪ್ರಶ್ನೆಗಳನ್ನು ಆರ್. ಅಶೋಕ್ ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ.












Click it and Unblock the Notifications