ರಾಯಚೂರಿನಲ್ಲಿ ಸಿಡಿಲಿಗೆ ಐವರು ಬಲಿ
ರಾಯಚೂರು, ಅ.16 : ಸಿಡಿಲು ಬಡಿದು ಬಾಲಕಿ ಸೇರಿದಂತೆ ಐದು ಜನರು ಸಾವಿಗೀಡಾಗಿರುವ ಘಟನೆ ರಾಯಚೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ಆಶ್ರಯ ಪಡೆದಿದ್ದಾಗ ಸಿಡಿಲು ಬಡಿದು ದುರ್ಘಟನೆ ಸಂಭವಿಸಿದೆ.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹುಲಿಗೆಪ್ಪ (40), ಚಂದ್ರು (30), ನಾಗರಾಜ (19), ನಿರ್ಮಲಾ (25) ಹಾಗೂ ಚೈತನ್ಯ (10) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಪರಶುರಾಮ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮಂಗಳವಾರ ಮಧ್ಯಾಹ್ನ ಇವರೆಲ್ಲರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಜೋರಾಗಿ ಮಳೆ ಆರಂಭವಾಗಿದೆ. ತಕ್ಷಣ ರಕ್ಷಣೆಗೆಂದು ಮರದ ಕೆಳಗೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಸಿಡಿಲು ಬಡಿದು ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಲದ ಬಳಿ ವಿದ್ಯುತ್ ತಂತಿ ಇದ್ದುದ್ದರಿಂದ ಸಿಡಿಲಿನ ಅಬ್ಬರೂ ಹೆಚ್ಚಾಗಿತ್ತು.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 20 ಕಾರ್ಮಿಕರು ಮರದಡಿಯಲ್ಲಿ ಆಶ್ರಯ ಪಡೆದಿದ್ದರು. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬಕ್ಕೆ ಜಿಲ್ಲಾಡಳಿತ 1.5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.
ಧಾರವಾಡದಲ್ಲಿ ಒಬ್ಬ ಸಾವು : ಸಿಡಿಲು ಬಡಿದು ವ್ಯಕ್ತಿನೊಬ್ಬ ಮೃತಪಟ್ಟ ಘಟನೆ ಧಾರವಾಡ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಶಿವಲಿಂಗಪ್ಪ ಹವಾಲದಾರ (40) ಅವರು ಸಂಜೆ ಹೊಲದಿಂದ ಮನೆಗೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.












Click it and Unblock the Notifications