ಕಾಂಗ್ರೆಸ್‌ನ ಮೊದಲ ಅಧ್ಯಕ್ಷರು ಬ್ರಿಟಿಷರು, ಕಾಂಗ್ರೆಸ್ಸಿಗರು ಬ್ರಿಟಿಷರ ಬೂಟು ನೆಕ್ಕಿದ್ದಾರಾ?: ಆರ್. ಅಶೋಕ್
ಬೆಂಗಳೂರು, ಡಿಸೆಂಬರ್ 25: ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ನಿಲುತ್ತಿತ್ತಿಲ್ಲ. ಯಾವ ಯೋಜನೆಗಳಿಗೂ ಅಡಿಗಲ್ಲು ಹಾಕದೇ, ನಾಡಿನ ಜನರ ಮೇಲೆ ಕಲ್ಲು ಹಾಕಿದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಇನ್ನೂ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹತಾಶರಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಬ್ರಿಟೀಷರ ಬೂಟು ನೆಕ್ಕುವವರು ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ ತಿರುಗೇಟು ಕೊಟ್ಟರು.
ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದ 7 ಕೋಟಿ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿದ್ದು, ಈವರೆಗೆ ಅಭಿವೃದ್ಧಿ ಕಾಮಗಾರಿಗೆ ಒಂದು ಅಡಿಗಲ್ಲನ್ನೂ ಹಾಕಿಲ್ಲ. ಜನರು ಸರ್ಕಾರದ ಬಗ್ಗೆ ಛೀ ಥೂ ಎಂದು ಮಾತನಾಡುತ್ತಿದ್ದಾರೆ. ಆದರೆ ಸರ್ಕಾರ ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ.

ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಹತಾಶರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ವೀರನಾಗಿದ್ದಾರೆ. ಬರ ಪರಿಹಾರಕ್ಕೆ ಇದೇ ವಾರದಲ್ಲಿ 2 ಸಾವಿರ ರೂ. ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ಈವರೆಗೆ ಹಣ ಸಿಕ್ಕಿಲ್ಲ. ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ.
ಸರ್ಕಾರ ನೀಡುವ 15-20 ಸಾವಿರ ರೂಪಾಯಿಗೆ ಶೌಚಾಲಯ ಸ್ವಚ್ಛತೆಗೆ ಯಾರು ಬರದೇ ಅಲ್ಲಿ ಮಕ್ಕಳು/ವಿದ್ಯಾರ್ಥಿಗಳ ಕೈಯಿಂದಲೇ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲುಗೊಳಿಸಿ ದೌರ್ಜನ್ಯ ಮಾಡಲಾಗಿದೆ. ಇವೆಲ್ಲಕ್ಕೂ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರ ಹಾಕಿದರು.
ಬ್ರಿಟಿಷರ ಬೂಟು ನೆಕ್ಕಿದ ಕಾಂಗ್ರೆಸ್
ಇನ್ನೂ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯು ಕಾಂಗ್ರೆಸ್‌ನ ಮನಸ್ಥಿತಿಯನ್ನು ಎತ್ತಿ ತೋರುತ್ತದೆ. ಸಮೀಕ್ಷೆಗಳ ಪ್ರಕಾರ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆ. ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಸೆಮಿಫೈನಲ್ ಗೆದ್ದಿದೆ.

ಆದರೆ ಕಾಂಗ್ರೆಸ್ ಫೈನಲ್‌ಗೆ ಬರುವ ಅವಕಾಶ ಕಳೆದುಕೊಂಡಿದೆ. ಅಲ್ಲದೆ ರಾಹುಲ್ ಗಾಂಧಿಯ ಬದಲು ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಮಾಡಿ ಎಂದು ಒಕ್ಕೂಟದ ಸದಸ್ಯರು ಬಯಸಿದ್ದಾರೆ. ಇವೆಲ್ಲ ಬೆಳವಣಿಗೆಯಿಂದ ಕಾಂಗ್ರೆಸ್ಸಿಗರು ಹತಾಶರಾಗಿದ್ದು ಬೇರೆ ವಿಷಯಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಕಾಂಗ್ರೆಸ್ ಸ್ಥಾಪನೆ ಮಾಡಿದ್ದೇ ಬ್ರಿಟಿಷರು. ಅಂದಮೇಲೆ ಕಾಂಗ್ರೆಸ್ಸಿಗರು ಅವರ ಬೂಟು ನೆಕ್ಕಿದ್ದಾರಾ? ಎಂದು ಪ್ರಶ್ನೆ ಮಾಡಿದರು.
ಯುದ್ಧ ಬಿಟ್ಟವನನ್ನು ಕಾಂಗ್ರೆಸ್ ಬೆಂಬಲಿಸುತ್ತದೆ
ಬ್ರಿಟಿಷರಿಂದ ಪಳಗಿದ ಕಾಂಗ್ರೆಸ್ಸಿಗರು ಅವರ ಕೈ ಕೆಳಗೆ ಕೆಲಸ ಮಾಡಿದ್ದರು. ಬಿಜೆಪಿಗೆ ಬ್ರಿಟಿಷರು ಎಂದೂ ಅಧ್ಯಕ್ಷರಾಗಿ ಆಯ್ಕೆಯಾಗಿರಲಿಲ್ಲ. ಯುದ್ಧ ಬಿಟ್ಟು ಓಡಿ ಬಂದು ಮಕ್ಕಳನ್ನು ಅಡಮಾನ ಇಟ್ಟ ಪಾಪಿ ಟಿಪ್ಪು ಸುಲ್ತಾನನನ್ನು ಕಾಂಗ್ರೆಸ್‌ನವರು ಬೆಂಬಲಿಸುತ್ತಾರೆ. ಭಗತ್‌ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಸುಭಾಷ್ ಚಂದ್ರ ಬೋಸ್ ರಕ್ತ ಹರಿಸಿ ಹೋರಾಟ ಮಾಡಿದ್ದರು. ಕನ್ನಡವನ್ನು ಕೊಂದವನು, ಹಿಂದುಗಳನ್ನು ಕೊಲ್ಲಲು ಕತ್ತಿ ಹಿಡಿದಿದ್ದ ಟಿಪ್ಪುವನ್ನು ಕಾಂಗ್ರೆಸ್‌ನವರು ಬೆಂಬಲಿಸುತ್ತಾರೆ. ಟಿಪ್ಪು ಯುದ್ಧ ಮಾಡಿ ಗೆಲ್ಲದೆ, ಮೈಸೂರು ಅರಸರನ್ನು ಜೈಲಿಗೆ ಕಳುಹಿಸಿ ಹೇಡಿತನದಿಂದ ಗೆದ್ದವನು. ಇಂತಹ ಮತಾಂಧನನ್ನು ಹೀರೋ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲ್ಲಿದೆ
ಮುಂಬರಲಿರುವ 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲುವುದು ಬಿಜೆಪಿ ಗುರಿ ಹೊಂದಿದೆ. ಅದಕ್ಕಾಗಿ ಸಮರ್ಥರಾದವರನ್ನು ಆಯ್ಕೆ ಮಾಡಲಾಗುತ್ತದೆ. ಜೆಡಿಎಸ್ ಕೂಡ ಈಗ ಪಕ್ಷದ ಜೊತೆಗಿದ್ದು, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಪಕ್ಷ ದುರ್ಬಲವಾಗಿರುವ ಕಡೆಗಳಲ್ಲಿ ಬಿಜೆಪಿ ಬಲ ಬರಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ತಿಳಿಸಿದರು.












Click it and Unblock the Notifications