ಕರ್ನಾಟಕದಲ್ಲಿ 'ಅಕ್ರಮ ವಲಸಿಗರ' ಬಂಧನ ಕೇಂದ್ರ ಆರಂಭ
ಬೆಂಗಳೂರು, ಡಿಸೆಂಬರ್ 24: ದೇಶದಲ್ಲಿ ಎಲ್ಲಿಯೂ ಅಕ್ರಮ ವಲಸಿಗರ ಬಂಧನ ಕೇಂದ್ರ ಸ್ಥಾಪಿಸುವ ಉದ್ದೇಶವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ವಿರುದ್ಧವಾಗಿ ನಗರದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ನೆಲಮಂಗಲದ ಸಮೀಪ ಕರ್ನಾಟಕ ಈಗಾಗಲೇ ಅಕ್ರಮ ವಲಸಿಗರನ್ನು ಇರಿಸುವ ತನ್ನ ಮೊದಲ ಡಿಟೆನ್ಷನ್ ಸೆಂಟರ್‌ಅನ್ನು ಆರಂಭಿಸಿದೆ.
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಕುರಿತು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಭಾರತದಲ್ಲಿ ಯಾವುದೇ ವಲಸಿಗರ ಬಂಧನ ಶಿಬಿರವಿಲ್ಲ ಎಂದು ಹೇಳಿದ್ದರು.
'ನಾವು ಕೇಂದ್ರವನ್ನು ಆರಂಭಿಸಿದ್ದೇವೆ. ಅಕ್ರಮ ವಲಸಿಗರನ್ನು ಇರಿಸಲು ಅದು ಸಿದ್ಧವಾಗಿದೆ' ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್ ಎಸ್ ಪೆದ್ದಪ್ಪಯ್ಯ ಅವರು ಹೇಳಿದ್ದಾರೆ. ಇದನ್ನು ರಾಜ್ಯ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಈ ಕೇಂದ್ರವನ್ನು ಜನವರಿಯಲ್ಲಿ ತೆರೆಯಲು ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಆದರೆ ಕೇಂದ್ರ ಸರ್ಕಾರದ ಸೂಚನೆಯಂತೆ ಮೊದಲೇ ಆರಂಭಿಸಲಾಗಿದೆ. ಈ ಕೇಂದ್ರವು ಆರಂಭವಾಗಿ ಕೆಲವೇ ದಿನಗಳು ಕಳೆದಿರುವುದರಿಂದ ಇದುವರೆಗೂ ಯಾವುದೇ ಅಕ್ರಮ ವಲಸಿಗರನ್ನು ಅಲ್ಲಿ ಬಂಧಿಸಿಟ್ಟಿಲ್ಲ.
'ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯು ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ಬಂಧನ ಶಿಬಿರಕ್ಕೆ ಕಳುಹಿಸಲಿದೆ. ಅಂತಹವರನ್ನು ಅಲ್ಲಿ ಇರಿಸಲು ಅಗತ್ಯ ಮೂಲಸೌಕರ್ಯ ಮತ್ತು ಸಿಬ್ಬಂದಿಯನ್ನು ಒದಗಿಸಲು ನಾವು ಸಿದ್ಧರಿದ್ದೇವೆ' ಎಂದು ಪೆದ್ದಪ್ಪಯ್ಯ ಹೇಳಿದ್ದಾರೆ.
ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯವನ್ನು ಬಂಧನ ಕೇಂದ್ರವನ್ನಾಗಿ ಪರಿವರ್ತಿಸಿದೆ. ಇದರಲ್ಲಿ ಆರು ಕೋಣೆಗಳು, ಒಂದು ಅಡುಗೆ ಮನೆ ಮತ್ತು ಭದ್ರತಾ ಕೊಠಡಿ ಇದೆ. ಇಲ್ಲಿ 24 ಜನರನ್ನು ಇರಿಸಬಹುದಾಗಿದೆ. ಎರಡು ವೀಕ್ಷಣಾಗೋಪುರಗಳನ್ನು ನಿರ್ಮಿಸಲಾಗಿದ್ದು, ಅದರ ಕಾಂಪೌಂಡ್‌ಗೆ ಮುಳ್ಳುತಂತಿಯ ರಕ್ಷಣೆ ಹಾಕಲಾಗಿದೆ.
ಅಕ್ರಮ ವಲಸಿಗರಿಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 35 ತಾತ್ಕಾಲಿಕ ಬಂಧನ ಕೇಂದ್ರಗಳನ್ನು ಗುರುತಿಸಿರುವುದಾಗಿ ಕರ್ನಾಟಕ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ. ಬಾಂಗ್ಲಾದೇಶದ ಇಬ್ಬರು ಅಕ್ರಮ ವಲಸಿಗರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಸರ್ಕಾರ ಈ ಮಾಹಿತಿ ನೀಡಿತ್ತು.
ವಿದೇಶಿಗರ ಕಾಯ್ದೆ ಅಡಿ 612 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ವಿವಿಧ ದೇಶಗಳ 866 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.












Click it and Unblock the Notifications