ಬಿಗ್ ಬಜಾರ್ ಗೋದಾಮಿಗೆ ಬೆಂಕಿ, 30 ಕೋಟಿ ನಷ್ಟ
ಆನೇಕಲ್, ಜ.30 : ಆನೇಕಲ್ ಪಟ್ಟಣದ ಇಂಡ್ಲವಾಡಿ ಕ್ರಾಸ್‍ನಲ್ಲಿರುವ ಬಿಗ್ ಬಜಾರ್ ಗ್ರೂಪ್‍ನ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸುಮಾರು 30 ಕೋಟಿ ನಷ್ಟ ಉಂಟಾಗಿದೆ. ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 220ಕ್ಕೂ ಹೆಚ್ಚು ಸಿಬ್ಬಂದಿ ಹೊರಗೋಡಿ ಬಂದಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. 12 ಅಗ್ನಿ ಶಾಮಕ ದಳದ ವಾಹನಗಳು ಸತತ ಆರು ಗಂಟೆ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.
ಗುರುವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಬಿಗ್ ಬಜಾರ್ ಗ್ರೂಪ್‍ಗೆ ಸೇರಿದ ಫೀಚರ್ ಸಪ್ಲೈ ಗೋದಾಮಿನಲ್ಲಿ ಶಾರ್ಟ್ ಸಕ್ರ್ಯುಟ್‍ನಿಂದ ಬೆಂಕಿ ಕಾಣಿಸಿಕೊಂಡಿತು. ಮೊದಲು ಗೋದಾಮಿನ ಐದನೇ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ, 5 ಎಕರೆ ವಿಸ್ತೀರ್ಣದ ಗೋದಾಮಿಗೆ ಹಬ್ಬಿದ್ದು, ಗೋದಾಮು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿದೆ.
ಅಗ್ನಿ ಆಕಸ್ಮಿಕದಿಂದ ಅಂದಾಜು 30 ಕೋಟಿಗೂ ಹೆಚ್ಚು ಬೆಲೆ ಬಾಳುವ ಸಿದ್ಧ ಉಡುಪುಗಳು, ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು, ಗೃಹ ಬಳಕೆ ವಸ್ತುಗಳು ಹಾಗೂ ಪೀಠೋಪಕರಣಗಳು ಭಸ್ಮವಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ ರಮೇಶ್ ಬಾನೋತ್, ಅಗ್ನಿ ಅನಾಹುತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಚಿತ್ರಗಳು : ಎಲ್ಎನ್ ಆಚಾರ್ಯ ಆನೇಕಲ್

5 ಎಕರೆ ಗೋದಾಮು ಅರ್ಧಗಂಟೆಯಲ್ಲಿ ಭಸ್ಮ
ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಗೋದಾಮಿನ ಐದನೇ ಅಂತಸ್ತಿನಲ್ಲಿ ಬೆಂಕಿ ಕಾಣಸಿಕೊಂಡಿತು. ಐದು ಎಕರೆ ವಿಸ್ತೀರ್ಣದ ಗೋದಾಮು ಅರ್ಧಗಂಟೆಯಲ್ಲಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಆನೇಕಲ್ ಪಟ್ಟಣದ ಇಂಡ್ಲವಾಡಿ ಕ್ರಾಸ್‍ನಲ್ಲಿರುವ ಈ ಗೋದಾಮು ಬೆಂಕಿಗೆ ಆಹುತಿಯಾಗಿದ್ದರಿಂದ ಸುಮಾರು 30 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

12 ಅಗ್ನಿ ಶಾಮಕ ದಳದ ಕಾರ್ಯಾಚರಣೆ
ಗೋದಾಮಿಗೆ ಬೆಂಕಿ ಬಿದ್ದ ಸುದ್ದಿ ತಿಳಿದ ತಕ್ಷಣ 12 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿದವು. ಆದರೆ, ಸತತ 6 ಗಂಟೆಗಳ ಕಾರ್ಯಾಚರಣೆ ನಂತರ ಅವರ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಯಿತು. ಅಷ್ಟರಲ್ಲಿ ಬೆಲೆ ಬಾಳುವ ಸಿದ್ಧ ಉಡುಪುಗಳು, ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು, ಗೃಹ ಬಳಕೆ ವಸ್ತುಗಳು ಹಾಗೂ ಪೀಠೋಪಕರಣಗಳು ಭಸ್ಮವಾಗಿದ್ದವು.

5 ಕಿ.ಮೀ ಚಾಚಿದ ಬೆಂಕಿಯ ಕೆನ್ನಾಲಿಗೆ
ಗೋದಾಮಿಗೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಸುಮಾರು 5 ಕಿ.ಮೀ ವರೆಗೂ ಕಾಣುತ್ತಿತ್ತು. ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡ ತಕ್ಷಣ 220ಕ್ಕೂ ಹೆಚ್ಚು ಸಿಬ್ಬಂದಿಯನ್ನ ಎಚ್ಚರಿಕೆ ಘಂಟೆ ಬಾರಿಸುವ ಮೂಲಕ ಹೊರಹೋಗುವಂತೆ ಮಾಡಲಾಯಿತು. ಆದ್ದರಿಂದ ಯಾವುದೇ ಪ್ರಾಣ ಹಾನಿ ಉಂಟಾಗಲಿಲ್ಲ.

5 ಎಕರೆಯಲ್ಲಿದೆ ಗೋದಾಮು
ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯಿಂದ ಗೋದಾಮು ನಡೆಸಲು ಪರಮಾನಿಗೆ ಪಡೆದುಕೊಳ್ಳಲಾಗಿತ್ತು. 5 ಎಕರೆ ಜಾಗದಲ್ಲಿ ಈ ಗೋದಾಮಿದೆ. ಚೀನಾದಿಂದ ಆಮದು ಮಾಡಿಕೊಳ್ಳಲಾದ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿತ್ತು

ನೀರಿನ ಕೊರತೆಯಿಂದ ಕಾರ್ಯಾಚರಣೆ ವಿಳಂಬ
ಗೋದಾಮಿನ ಹೊರಗೆ ಅಗ್ನಿ ಅವಘಡ ಸಂಭವಿಸಿದರೆ ಸಹಾಯಕವಾಗಲಿ ಎಂದು ಪೈಪ್ ಗಳನ್ನು ಆಳವಡಿಸಲಾಗಿತ್ತು. ಆದರೆ, ಅವುಗಳಲ್ಲಿ ನೀರು ತುಂಬಿಸಿರಲಿಲ್ಲ. ಆದ್ದರಿಂದ ಬೆಂಕಿ ನಂದಿಸುವ ಕಾರ್ಯಾಚರಣೆಗೆ ನೀರಿನ ಕೊರತೆ ಉಂಟಾಯಿತು.












Click it and Unblock the Notifications