Bengaluru Rain: ಬೆಂಗಳೂರಿನಲ್ಲಿ ಎಡೆಬಿಡದೇ ಸುರಿಯುತ್ತಿದೆ ಮಳೆ: ಶಾಲಾ ಕಾಲೇಜು ರಜೆ ಕುರಿತು ಅಪ್ಡೇಟ್
ಬೆಂಗಳೂರು, ಡಿಸೆಂಬರ್ 02: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಅವಾಂತರ ಸೃಷ್ಟಿಸಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ತಟ್ಟಿದ್ದು, ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗಿದೆ. ರಾತ್ರಿ ಇಡೀ ಮಳೆ ಸುರಿದಿದೆ.
ಭಾರತೀಯ ಹವಾಮಾನ ಇಲಾಖೆ ( ಐಎಂಡಿ ) ಇಂದು (ಸೋಮವಾರ) ತೀವ್ರ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಇತರ ಭಾಗಗಳು ಹೈ ಅಲರ್ಟ್ ಘೋಷಿಸಿಲಾಗಿದ್ದು, ಕೇರಳಕ್ಕೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಇರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದಿಲ್ಲ ಎಂದು ಜಿಲ್ಲಾಧಿಕರಿಗಳು ತಿಳಿಸಿರುತ್ತಾರೆ. ಇನ್ನೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಫೆಂಗಲ್ ಚಂಡಮಾರುತ ಹೊಡೆತಕ್ಕೆ ಬೆಂಗಳೂರು ಜನತೆ ರೋಸಿ ಹೋಗಿದ್ದು, ಫೆಂಗಲ್ ಚಂಡಮಾರುತ ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ. ನೆರೆಯ ರಾಜ್ಯಕ್ಕೆ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಬೆಂಗಳೂರಿಗೂ ತಟ್ಟಿದೆ.
ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಭಾನುವಾರ ಇಡೀ ದಿನ ಮಳೆ ಸುರಿದಿದೆ. ಭಾನುವಾರ ಮಧ್ಯಾಹ್ನದ ನಂತರವಂತೂ ಬಿಡುವುಕೊಡದೇ ಮಳೆ ಸುರಿದಿದ್ದು, ಇಂದು ಸಹ (ಸೋಮವಾರ) ಮುಂಜಾನೆಯಿಂದಾಲೇ ಮಳೆಯಾಗುತ್ತಿದೆ.
ಫೆಂಗಲ್ ಸೈಕ್ಲೋನ್ ಪರಿಣಾಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೋಲಾರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಹಾಗೇ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಶಾಲೆ, ಕಾಲೇಜುಗಳಿಗೆ ಇಂದು ರಜೆ ಪ್ರಕಟಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳು ರಜೆ ಘೋಷಣೆ ಮಾಡಿಲ್ಲ. ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಪೋಷಕರು ಎಚ್ಚರಿಕೆಯಿಂದ ಮಕ್ಕಳನ್ನ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ.
ಫೆಂಗಲ್ ಸೈಕ್ಲೋನ್ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೂ ಚಂಡಮಾರುತದಿಂದಾಗಿ ಮಂಗಳೂರು ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ ಜೋರಾಗಿದ್ದು, ಪಣಂಬೂರು, ಉಳ್ಳಾಲ, ಸೋಮೇಶ್ವರ ಬೀಚ್ಗಳಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿವೆ. ಉಡುಪಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನೂ ಚಿಕ್ಕಮಗಳೂರಿನಲ್ಲಿ ಚಳಿಗೆ ಮಲೆನಾಡಿಗರು ಹೈರಾಣಾಗಿದ್ದಾರೆ. ಮತ್ತೊಂದೆಡೆ ಬಿಸಿಲನಾಡು ವಿಜಯಪುರದಲ್ಲೂ ಶೀತಗಾಳಿ ಬೀಸುತ್ತಿದೆ.
ಮಂಡ್ಯ ಜಿಲ್ಲೆಯಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಆದೇಶ ಹೊರಡಿಸಿದ್ದು, ಚಾಮರಾಜನಗರ ಜಿಲ್ಲೆಯ ಶಾಲಾ ಕಾಲೇಜುಗಳಿಗೂ ಕೂಡ ರಜೆ ಘೋಷಿಸಲಾಗಿದೆ. ರಜೆ ಘೋಷಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪ ನಾಗರಾಜ್ ಕಡ ಆದೇಶ ಹೊರಡಿಸಿದ್ದಾರೆ. ಮೈಸೂರು ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಫೆಂಗಲ್ ಪರಿಣಾಮದಿಂದ ಮಳೆಯಾಗುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications