Karnataka Rain: ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ: ಗೋಕರ್ಣ ದೇವಾಲಯ ಜಲಾವೃತ
ಕುಮಟಾ, ಜೂನ್ 08: ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿರುವ ಮುಂಗಾರು ಮಳೆ ಆರಂಭಕ್ಕೆ ಭರ್ಜರಿಯಾಗಿ ಸುರಿಯುತ್ತಿದೆ. ಒಂದೇ ವಾರದಲ್ಲಿ ರಾಜ್ಯವನ್ನು ಆವರಿಸಿದ್ದು, ಉತ್ತರ ಕನ್ನಡದ ಜಿಲ್ಲೆಯಲ್ಲಿ (Uttara Kannada Weather) ಇಂದು ಬೆಳಗ್ಗೆ ಶನಿವಾರದವರೆಗೆ ಈ ವರ್ಷದ ಅತ್ಯಧಿಕ ಗರಿಷ್ಠ ಮಳೆ ದಾಖಲಾಗಿದೆ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಮಾಹಿತಿ ಪ್ರಕಾರ, ಈ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರಿನಲ್ಲಿ ಅತ್ಯಧಿಕ ಗರಿಷ್ಠ ಮಳೆ ಉತ್ತರ ಕನ್ನಡದ ಕುಮಟಾದಲ್ಲಿ ಆಗಿದೆ. ಶನಿವಾರ ಬೆಳಗ್ಗೆ 7.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಕುಮಟಾದಲ್ಲಿ ಬರೋಬ್ಬರಿ 344 ಮಿಲಿ ಮೀಟರ್ (34.4ಸೆಂಟಿ ಮೀಟರ್) ಮಳೆ ದಾಖಲಾಗಿದೆ.

ಉತ್ತರ ಕನ್ನಡದಲ್ಲಿ ವರುಣನ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಜಿಲ್ಲೆ ಬಹುತೇಕ ಎಲ್ಲ ತಾಲೂಕುಗಳಲ್ಲಿ ಧಾರಾಕಾರ ಮಳೆ ದಾಖಲಾಗಿದ್ದು, ಜನ ಜೀವನ ಅಸ್ತವ್ಯವಸ್ತೆ ಮಾಡಿದೆ. ರಸ್ತೆಗಳು ಜಲಾವೃತಗೊಂಡಿವೆ. ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಷ್ಟರ ಮಟ್ಟಿಗೆ ಮಳೆ ಬಿದ್ದಿದೆ.
ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ? ವಿವರ
ಕುಮಟಾದಂತೆ ಹನೇಹಳ್ಳಿಯಲ್ಲಿ 248 ಮಿ.ಮೀ, ಹೆಗಡೆ 236 ಮಿ.ಮೀ, ಬೊಬ್ರವಾಡ 230 ಮಿ.ಮೀ, ಹಳದೀಪುರ 227ಮಿ.ಮೀ, ಗೋಕರ್ಣ 197ಮಿ.ಮೀ, ಬ್ಲೇಲೆ 193 ಮಿ.ಮೀ ಹಾಗೂ ಅಂಕೋಲಾದಲ್ಲಿ 192 ಮಿ.ಮೀ ಮಳೆ ದಾಖಲಾಗಿದೆ. ಇನ್ನೂ ಹೆಲವಡೆ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಮಳೆ ಆಗಿದೆ.

ಇನ್ನೂ ಕಾರವಾರದಲ್ಲೂ ಅತ್ಯಧಿಕ ಮಳೆ ಬಿದ್ದಿದೆ. ಕೆಲವೆಡೆ ನೆನ್ನೆ ಬೆಳಗ್ಗೆಯಿಂದ ಮಳೆಯಾದರೆ, ಹಲವೆಡೆ ಸಂಜೆ ನಂತರ ಸುರಿಯಲು ಆರಂಭಿಸಿತು.
ಮಹಾಬಲೇಶ್ವರ ದೇವಸ್ಥಾಕ್ಕೆ ನುಗ್ಗಿದ ಕೊಳಚೆ ನೀರು
ಗೋಕರ್ಣದಲ್ಲಿ ಬಿದ್ದ ಮಳೆಯಿಂದಾಗಿ ಮಹಾಬಲೇಶ್ವರ ದೇವಸ್ಥಾನದ ಒಳಗೆ ನೀರು ನುಗ್ಗಿದೆ. ಮಳೆ ನೀರಿನ ಜೊತೆಗೆ ಕೊಳಚೆ ನೀರು ದೇಗುಲಕ್ಕೆ ನುಗ್ಗಿದೆ. ಕಳೆದ ವರ್ಷವು ಇದೇ ರೀತಿ ಆಗಿತ್ತು.
ಗರ್ಭಗುಡಿ ಹೊಕ್ಕ ಮಳೆ-ಕೊಳಚೆ ನೀರನ್ನು ಹೊರ ಹಾಕಲು ದೇವಸ್ಥಾನದ ಸಿಬ್ಬಂದಿ ಪರದಾಡಿದರು. ಇಲ್ಲಿನ ಸಂಗಮನಾಲಾದ ಮೂಲಕ ಸಮುದ್ರ ಸೇರಬೇಕಿದ್ದ ನೀರು ದೇವಸ್ಥಾನ ಪ್ರವೇಶಿಸಿದ್ದರಿಂದ ಮಹಾಪೂಜೆಗೆ ತೊಂದರೆ ಆಯಿತು. ನಂತರ ಸಮುದ್ರ ಸೇರಬೇಕಿದ್ದ ಮಾರ್ಗದಲ್ಲಿನ ಮರಳು ದಿನ್ನೆ ಕಡೆದು ನೀರು ಸರಾಗವಾಗಿ ಹೋಗುವಂತೆ ಮಾಡಿದ್ದಾರೆ. ಬಳಿಕ ಪೂಜೆ ಕಾರ್ಯಗಳು ನೆರವೇರಿವೆ ಎನ್ನಲಾಗಿದೆ.
3 ದಿನ ಆರೆಂಜ್ ಅಲರ್ಟ್
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಕರ್ನಾಟಕದಲ್ಲಿ ಮುಂಗಾರು ಮಳೆ ಆರ್ಭಟ ಕಂಡು ಬರಲಿದೆ. ಮುಂದಿನ ಮೂರು ದಿನ ಉತ್ತರ ಕನ್ನಡ ಜಿಲ್ಲೆಗೆ ಅತ್ಯಧಿಕ ಮಳೆ ಸುರಿಯುವ ಕಾರಣಕ್ಕೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಇಂದು ಹಾಗೂ ನಾಳೆ ಉತ್ತರ ಕನ್ನಡ ಸೇರಿದಂತೆ ಕರಾವಳಿ ಸೇರಿದಂತೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಹಲವೆಡೆ ವ್ಯಾಪಕ ಮಳೆ ಆಗಲಿದೆ. ಅಗತ್ಯ ಎಚ್ಚರಿಕೆ ವಹಿಸಬೇಕು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ಇಳಿಯದಂತೆ ಸೂಚಿಸಲಾಗಿದೆ.












Click it and Unblock the Notifications