Shakti Scheme: ಉಚಿತ ಬಸ್ ಪ್ರಯಾಣ ಬಳಸಿದ್ದು ಎಷ್ಟು ಕೋಟಿ ಮಹಿಳೆಯರು ಗೊತ್ತಾ?
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ಭಾರಿ ಸದ್ದು ಮಾಡಿತ್ತು. ಒಂದ್ಕಡೆ ಈ ಯೋಜನೆ ಜಾರಿಯಿಂದ ಸಾಕಷ್ಟು ಸಮಸ್ಯೆಯಾಗಿದೆ ಅನ್ನೋ ಆರೋಪ ವಿರೋಧ ಪಕ್ಷಗಳದ್ದು. ಆದ್ರೆ ಈ ಯೋಜನೆ ಕೋಟ್ಯಂತರ ಕುಟುಂಬಕ್ಕೆ ಆಸರೆಯಾಗಿದೆ ಅನ್ನೋದು ಕಾಂಗ್ರೆಸ್ ವಾದ. ಈ ಇಬ್ಬರ ವಾದ & ವಿವಾದದ ಮಧ್ಯೆ 'ಶಕ್ತಿ ಯೋಜನೆ' ಭರ್ಜರಿ ಸಕ್ಸಸ್ ಕಂಡಿದೆ. ಹಾಗಾದ್ರೆ ಉಚಿತ ಬಸ್ ಪ್ರಯಾಣ ಬಳಸಿದ್ದು ಎಷ್ಟು ಕೋಟಿ ಮಹಿಳೆಯರು ಗೊತ್ತಾ?
ಶಕ್ತಿ ಯೋಜನೆ ಜಾರಿಯಾದ ನಂತರ ನವೆಂಬರ್ 21ರ ವರೆಗು ಒಟ್ಟಾರೆ 99.75 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯ ಸದುಪಯೋಗ ಮಾಡ್ಕೊಂಡಿದ್ದಾರೆ. ಇನ್ನ ಇನ್ನೆರಡು ದಿನಗಳಲ್ಲಿ ನೂರು ಕೋಟಿ ದಾಟಲಿದೆ ಎನ್ನಲಾಗಿದೆ. ತಿಂಗಳ ಸರಾಸರಿ ಪ್ರಯಾಣಿಕರ ಸಂಖ್ಯೆ ಏಪ್ರಿಲ್ 2023 ರಲ್ಲಿ 84.17 ಲಕ್ಷ ಇದ್ದು, ಶಕ್ತಿ ಯೋಜನೆ ಜಾರಿ ನಂತರ 1.08 ಕೋಟಿಯಿಂದ 1.15 ಕೋಟಿ ವರೆಗೆ ಹೆಚ್ಚಳ ವಾಗಿದೆ ಎಂದು ಸರ್ಕಾರ ತಿಳಿಸಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ 828 ಸಾಮಾನ್ಯ & 145 ವಿದ್ಯುತ್ ಚಾಲಿತ ಬಸ್ ಸೇರ್ಪಡೆಗೊಳಿಸಲಾಗುತ್ತಿದೆ. ಈ ಮಧ್ಯೆ ಬಸ್‌ಗಳ ಖರೀದಿ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ...
ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತಂತೆ ಸಂಬಂಧಪಟ್ಟ ಇಲಾಖೆ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ವಿಚಾರ ಚರ್ಚೆ ಮಾಡಲಾಯಿತು. ಹಾಗೇ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ 1,10,96,413 ಕಾರ್ಡುದಾರರಿಗೆ ಡಿಬಿಟಿ ಮಾಡಲಾಗಿದೆ. ಈವರೆಗೆ ಒಟ್ಟು 2,444.11 ಕೋಟಿ ರೂ. ಮೊತ್ತವನ್ನ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. 12.95 ಲಕ್ಷ ಚೀಟಿದಾರರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮೂಲಕ ಯೋಜನೆಗೆ ಸೇರ್ಪಡೆ ಮಾಡಲಾಗಿದೆ. 2.60 ಲಕ್ಷ ಹೊಸ ಖಾತೆಗಳನ್ನು ಅಂಚೆ ಕಚೇರಿಗಳಲ್ಲಿ ತೆರೆಯಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಪಡಿತರ ಚೀಟಿ ವಿಷಯದಲ್ಲಿ ಸಮಸ್ಯೆ
7.67 ಲಕ್ಷ ಅನರ್ಹ ಪಡಿತರ ಚೀಟಿ ವಿಷಯದಲ್ಲಿ ಸಮಸ್ಯೆ ಗುರುತಿಸಿ ಬಗೆಹರಿಸಲು ಕ್ರಮವನ್ನ ಕೈಗೊಳ್ಳಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಮನೆ ಯಜಮಾನ ಊರಲ್ಲಿ ಇಲ್ಲದ ಕಾರಣ ತಾಂತ್ರಿಕ ಸಮಸ್ಯೆ ಆಗಿರುವುದರಿಂದ, ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸುವ ಕುರಿತಂತೆ ಸಚಿವ ಸಂಪುಟದ ಮುಂದೆ ಮಂಡಿಸಲು ಸೂಚಿಸಲಾಗಿದೆ. ಡಿಸೆಂಬರ್ 31 ರ ಒಳಗೆ ಎಲ್ಲ ಅರ್ಹರಿಗೆ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಉಚಿತ ವಿದ್ಯುತ್ ಗ್ಯಾರಂಟಿ ಬಗ್ಗೆ
ಗೃಹಜ್ಯೋತಿ ಯೋಜನೆ ಅಡಿ ಈವರೆಗೆ 1.62 ಕೋಟಿ ಜನ ನೋಂದಾಯಿಸಿದ್ದು 1.50 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಸೌಲಭ್ಯ ದೊರೆಯುತ್ತಿದೆ. ಆಗಸ್ಟ್ ತಿಂಗಳಿಂದ ಈವರೆಗೆ 2900 ಕೋಟಿ ರೂ. ಭರಿಸಲಾಗಿದೆ. ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ, ಅಮೃತ ಜ್ಯೋತಿ ಯೋಜನೆ ಫಲಾನುಭವಿಗಳ ಇಲಾಖೆ ದತ್ತಾಂಶದಲ್ಲಿ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಸೇರ್ಪಡೆಯ ಮಾಡಲಾಗಿದೆ. ಫಲಾನುಭವಿಗಳು ಯಾರೂ ಗೃಹ ಜ್ಯೋತಿಯಿಂದ ಬಿಟ್ಟು ಹೋಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಎಷ್ಟು ಜನ?
ನವೆಂಬರ್ ತನಕ ಒಟ್ಟಾರೆ 1.17 ಕೋಟಿ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಅಡಿ ನೋಂದಣಿಯಾಗಿದ್ದು 1.10 ಕೋಟಿ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ. 2 ಲಕ್ಷ ಫಲಾನುಭವಿಗಳಿಗೆ ಸಂಬಂಧಿಸಿದ ತೊಡಕು ನಿವಾರಿಸಲಾಗ್ತಿದೆ. ಖಾತೆ ಮಾಹಿತಿಯ ಗೊಂದಲ, ಆಧಾರ್ ಲಿಂಕ್ ಆಗದಿರುವುದು ಮೊದಲಾದ ಕಾರಣಗಳಿಂದ ಹಣ ವರ್ಗಾವಣೆಗೆ ತೊಡಕಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಯೋಜನೆ ಫಲಾನುಭವಿಗಳನ್ನು ನೇರ ಬ್ಯಾಂಕ್‌ಗೆ ಕರೆದೊಯ್ದು ಸಮಸ್ಯೆ ಬಗೆಹರಿಸಲಾಗುತ್ತಿದೆ. ಕೆಲವು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ನೆರವು ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.
ಗೃಹಲಕ್ಷ್ಮಿ ಫಲಾನುಭವಿಗಳು ಬಿಟ್ಟು ಹೋಗಿದ್ದಲ್ಲಿ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹ ಲಕ್ಷ್ಮಿ ಅದಾಲತ್ ಆಯೋಜಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ಹಾಗೇ ಗ್ಯಾರಂಟಿಗಳ ಅನುಷ್ಠಾನಕ್ಕೆ ಖಡಕ್ ಸೂಚನೆ ನೀಡಲಾಗಿದೆ.












Click it and Unblock the Notifications