Cauvery water dispute: ಮತ್ತೆ ಉಲ್ಬಣಗೊಂಡ ಕಾವೇರಿ ಜಲವಿವಾದ- ಎರಡೂ ರಾಜ್ಯಗಳ ನಡುವಿನ ಸಂಘರ್ಷಕ್ಕೆ ಮೂಲ ಕಾರಣಗಳೇನು?
ಬೆಂಗಳೂರು, ಆಗಸ್ಟ್ 21: ಕಾವೇರಿ ನೀರು ( Cauvery water ) ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ( Tamil Nadu ) ಸರ್ಕಾರ ಸುಪ್ರೀಂ ಕೋರ್ಟ್ ( Supreme Court of India ) ಮೊರೆ ಹೋಗಿದೆ. ಇದೇ ವಿಚಾರವಾಗಿ ಚರ್ಚಿಸಲು ಆಗಸ್ಟ್ 23 ರಂದು ಕರ್ನಾಟಕ ( Karnataka ) ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಬುಧವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೆಲವು ಸಂಸದರಿಗೂ ಆಹ್ವಾನ ನೀಡಲಾಗಿದೆ. ಈ ಮೂಲಕ ಕಾವೇರಿ ಜಲವಿವಾದ ಮತ್ತೆ ಎರಡೂ ರಾಜ್ಯಗಳ ನಡುವಿನ ಸಂಘರ್ಷವನ್ನು ಉಲ್ಬಣಗೊಳಿಸಿರುವುದು ಕಂಡುಬಂದಿದೆ.
ಸಿಡಬ್ಲ್ಯುಎಂಎ ಆದೇಶ: ತಾತ್ಕಾಲಿಕ ಪರಿಹಾರ
ಮಳೆಯ ಕೊರತೆಯಿಂದಾಗಿ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗಿದೆ ಎಂದು ಕರ್ನಾಟಕ ಸರ್ಕಾರದ ವಾದವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಶುಕ್ರವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ಪತ್ರ ಬರೆದಿದೆ. ಮುಂದಿನ 15 ದಿನಗಳ ವರೆಗೆ ತಮಿಳುನಾಡಿಗೆ ಪ್ರತಿದಿನ 10,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ನಿರ್ದೇಶಿಸಿದ ಆದೇಶವನ್ನು ಪರಿಶೀಲಿಸುವಂತೆ ಮನವಿ ಮಾಡಿದೆ.

ಎರಡು ರಾಜ್ಯಗಳ ನದಿ ನೀರು ವಿವಾದವನ್ನು ಪರಿಹರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಸಿಡಬ್ಲ್ಯುಎಂಎ ಅನ್ನು ರಚಿಸಲಾಗಿದೆ. ಆದರೆ, ಸಿಡಬ್ಲ್ಯುಎಂಎ ತಾತ್ಕಾಲಿಕ ಪರಿಹಾರವನ್ನು ನೀಡಿದೆಯೇ ಹೊರತು ಶಾಶ್ವತ ಪರಿಹಾರವನ್ನು ನೀಡಿಲ್ಲವೆಂದು ಮತ್ತೊಮ್ಮೆ ಸಾಬೀತಾಗಿದೆ.
ಕರ್ನಾಟಕ ವರ್ಸಸ್ ತಮಿಳುನಾಡು
ಮುಂಗಾರು ಮಳೆ ಕೊರತೆಯಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿಕೊಂಡಿದೆ. ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರವೇ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೆಂದು ಕರ್ನಾಟಕದ ವಾದವಾಗಿದೆ.
ಇದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆಹೋಗಿದೆ. ರಾಜ್ಯದಲ್ಲಿ ಬೆಳೆಗಳು ಬೆಳೆದು ನಿಂತಿವೆ. ಕರ್ನಾಟಕವು ಪ್ರತಿದಿನ 24,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ನಿರ್ದೇಶಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ ಮಾಡಿದೆ.

ತಮಿಳುನಾಡಿನ ಆರೋಪವೇನು?
ತಮಿಳುನಾಡಿನಲ್ಲಿರುವ ಕಾವೇರಿ ಜಲಾನಯನ ಪ್ರದೇಶದಲ್ಲಿ ಬೆಳೆಗಳಿಗ ನೀರಿನ ಅಭಾವ ಉಂಟಾಗಿದೆ ಎಂದು ಅಲ್ಲಿನ ಸರ್ಕಾರ ಆರೋಪಿಸಿದೆ. ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟವು ಕೇವಲ 53 ಅಡಿಗಳಿಗೆ ಇಳಿದಿದ್ದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ, ಇದು ಅವರ ಬೆಳೆಗೆ ವಿಳಂಬವಾಗಿದೆ ಎಂದು ತಮಿಳುನಾಡು ಹೇಳಿಕೊಂಡಿದೆ. ಕಳೆದ ವರ್ಷ ಅಂದರೆ 2022 ರಲ್ಲಿ, ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟವು ಇದೇ ಸಮಯದಲ್ಲಿ 120 ಅಡಿ ಇತ್ತು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಕಾವೇರಿ ವಿವಾದ: ಎರಡೂ ರಾಜ್ಯಗಳಲ್ಲಿ ಆಂತರಿಕ ರಾಜಕೀಯ
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಎರಡೂ ರಾಜ್ಯಗಳಲ್ಲಿ ಆಂತರಿಕ ರಾಜಕೀಯ ನಡೆಯುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ವಾಗ್ದಾಳಿ ನಡೆಸಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.
ತಮಿಳುನಾಡಿನಲ್ಲಿರುವ ಆಡಳಿತ ಪಕ್ಷಕ್ಕೆ ಕಾಂಗ್ರೆಸ್ ಮಿತ್ರಪಕ್ಷವಾಗಿದೆ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂದು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಅತ್ತ ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ಬಿಜೆಪಿ ಹಾಗೂ ಎಐಎಡಿಎಂಕೆ ಪಕ್ಷಗಳು ಹರಿಹಾಯ್ದಿವೆ. ತನ್ನ ಮಿತ್ರ ಪಕ್ಷವಾದ ಕಾಂಗ್ರೆಸ್‌ನ ಒತ್ತಡಕ್ಕೆ ಆಡಳಿತರೂಢ ಡಿಎಂಕೆ ಪಕ್ಷವು ಮಣಿದಿದೆ ಎಂದು ಎಐಎಡಿಎಂಕೆ ಟೀಕಿಸಿದೆ.












Click it and Unblock the Notifications