ಸಿಎಂ ಸಿದ್ದು ಆಪ್ತ ಕೆಂಪಯ್ಯ ಲೋಕಸಭಾ ಚುನಾವಣೆಗೆ?
ಬೆಂಗಳೂರು, ಡಿ. 24: ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ರಾಜಕೀಯ ಪಡಸಾಲೆಯಲ್ಲಿ ಮಿಂಚಲು ಬಂದು ಹೊಸ್ತಿಲಲ್ಲೇ ಎಡವಿರುವಾಗ ಮತ್ತೊಬ್ಬ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ರಾಜಕೀಯದಲ್ಲಿ ಒಂದು 'ಕೈ'ನೋಡಲು ಸಜ್ಜಾಗುತ್ತಿದ್ದಾರೆ.
ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರಾದ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ವತಿಯಿಂದ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. (ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಗುಂಡಿಕ್ಕಿ : ಬಿದರಿ)

ಪ್ರಸ್ತುತ, ಮುಖ್ಯಮಂತ್ರಿ ಸಿದ್ದರಾಮಯ್ಯನವರರಿಗೆ ಪರಮಾಪ್ತರಾಗಿದ್ದಾರೆ ಅನ್ನುವುದಕ್ಕಿಂತ ಮಾಜಿ ಐಪಿಎಸ್ ಕೆಂಪಯ್ಯ ಅವರು ತಮ್ಮ ಸೇವಾವಧಿಯ ಉಚ್ಛ್ರಾಯದಲ್ಲಿದ್ದಾಗ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹಂತಕರನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದರು.
ಇಂತಹ ಹಿನ್ನೆಲೆಯಿರುವ ಮಾಜಿ ಐಪಿಎಸ್ ಕೆಂಪಯ್ಯ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಗೆ ಪಕ್ಷತ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೆಪಿಸಿಸಿ ಕಚೇರಿಯ ಅಂಗಳದಿಂದ ಕೇಳಿಬಂದಿದೆ. ಮಾಜಿ ಐಪಿಎಸ್ ಕೆಂಪಯ್ಯ ಅವರೂ ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಐಪಿಎಸ್ ಕೆಂಪಯ್ಯ ಅವರಂದುಕೊಂಡಂತೆ ಎಲ್ಲವೂ ನಡೆದರೆ ಬಹುಶಃ ಕೊಪ್ಪಳ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎಂದು KPCC ಮೂಲಗಳು ತಿಳಿಸಿವೆ.
ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವನೆ ನನ್ನ ಎದುರಿಗಿಲ್ಲ. ಆದರೆ ಅಂತಹ ಅವಕಾಶ ಬಂದರೆ ಪರಿಗಣಿಸುವುದಾಗಿ ಮಾಜಿ ಐಪಿಎಸ್ ಕೆಂಪಯ್ಯ ಹೇಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದ ಮತ್ತೊಬ್ಬ ಮಾಜಿ ಐಪಿಎಸ್ ಶಂಕರ ಮಹಾದೇವ ಬಿದರಿ ಅವರು ರಾಜಕೀಯ ನೆಲೆಯಲ್ಲಿ ಸದೃಢವಾಗಿ ನಿಲ್ಲದೆ ಹೋಗಿದ್ದು ಹಸಿರಾಗಿರುವಾಗ ಖಡಕ್ ಅಧಿಕಾರಿ ಕೆಂಪಯ್ಯ ಏಳಿಗೆ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಕಾಂಗ್ರೆಸ್ ಪಕ್ಷವು 2009ರ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಒಬ್ಬ ಮಾಜಿ ಐಪಿಎಸ್ ಎಚ್ ಟಿ ಸಾಂಗ್ಲಿಯಾನಾ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ಪಿಸಿ ಮೋಹನ್ ಅವರಿಗೆ ಸೋತಿದ್ದರು. ಸಾಂಗ್ಲಿಯಾನಾ ಈ ಬಾರಿಯೂ ಚುನಾಔನೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.












Click it and Unblock the Notifications