ಹುಲಿ ಉಗುರು ಪ್ರಕರಣ: ಕಾನೂನು ಎಲ್ಲರಿಗೂ ಒಂದೇ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 25: ರಾಜ್ಯದಲ್ಲಿ ಹುಲಿ ಉಗುರು, ಚರ್ಮ ಧರಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಚರ್ಚೆಗಳು, ಆಗ್ರಹಗಳು ಕೇಳಿ ಬಂದಿವೆ. ರಾಜಕಾರಣಿಗಳು ಸೇರಿದಂತೆ ಸ್ಯಾಂಡಲ್‌ವುಡ್ ನಟರು ಹುಲಿ ಉಗುರು ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ಏನು ಕ್ರಮ ಕೈಗೊಳ್ಳಲಿದೆ ಎಂಬ ಪ್ರಶ್ನೆ ಎದ್ದಿದೆ. ಈ ಮಧ್ಯೆ ಸ್ವತಃ ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಬಿಗ್ ಬಾಸ್-10 ಮನೆಯಿಂದ ಹಳ್ಳಕಾರ್ ವರ್ತೂರು ಸಂತೋಷ್ಅವರನ್ನು ಕರೆತಂದು 'ಹುಲಿ ಉಗುರು' (Tiger Nails) ಧರಿಸಿದ್ದಾರೆಂದು ಬಂಧಿಸಲಾಯಿತು. ಇದಾದ ಬಳಿಕ ಯಾರು ಯಾರು ಹುಲಿ ಉಗುರು ಧರಿಸಿದ್ದಾರೆ, ಚರ್ಮ ಬಳಕೆ ಮಾಡಿದ್ದಾರೆ ಎಂಬ ಫೋಟೊಗಳು ಹರಿದಾಡತೊಡಗಿದವು.

ಈ ಸಂಬಂಧ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ ಅವರು, ವನ್ಯ ಜೀವಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ವನ್ಯಜೀವಿಗಳಿಗೆ ತೊಂದರೆ, ಹಾನಿ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಅದು ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದಂತಾಗುತ್ತದೆ.
ಇಲಾಖೆಯಿಂದ ಸೂಕ್ತ ಕ್ರಮ
ವನ್ಯ ಜೀವಿ ಚರ್ಮ, ಉಗುರು ಇನ್ನಿತರ ದೇಹದ ಭಾಗಗಳ ಬಳಕೆ, ಸಾಗಾಣೆ, ಸಂಗ್ರಹಿಸಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನೆಲದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿದೆ. ಹುಲಿ ಉಗುರು (Tiger Claw) ಬಗ್ಗೆ ನೈಜತೆ ಲಭ್ಯವಾದಲ್ಲಿ ಇಲಾಖೆ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹುಲಿ ಉಗುರಿನ ಧರಿಸಿದ ವಿಚಾರದಲ್ಲಿ ನಟ ಜಗ್ಗೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಕೇಳಿ ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ವೈಯಕ್ತಿಕವಾಗಿ ಯಾರು ಹೆಸರು ಪ್ರಸ್ತಾಪಿಸುವುದಿಲ್ಲ. ಇಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ಪರೋಕ್ಷವಾಗಿ ನಟ ಬಿಜೆಪಿ ನಾಯಕ ಜಗ್ಗೇಶ್ ಮತ್ತು ನಟ ದರ್ಶನ್ ಅವರಿಗೆ ನೈಜತೆ ಆಧಾರದ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ಸಂದೇಶ ರವಾನಿಸಿದರು.

ಅರಣ್ಯ ಇಲಾಖೆಯಿಂದ ಪರಿಶೀಲನೆ
ಸದ್ಯ ಇವರಿಗೆಲ್ಲ ಅರಣ್ಯ ಇಲಾಖೆ ಆದಷ್ಟು ಶೀಘ್ರವೇ ನೋಟಿಸ್ ನೀಡಲಿದೆ ಎನ್ನಲಾಗುತ್ತದೆ. ಇತ್ತ ಬೇರೆ ಯಾರಾದರೂ ಈ ರೀತಿ ಹುಲಿ ಉಗುರು ಧರಿಸುತ್ತಿದ್ದಾರೆ ಎಂಬ ಬಗ್ಗೆ ಪರಿಶೀಲಿಸುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಹುಲಿ ಉಗುರು ಧರಿಸಿದವರ ಸಾಲಿನಲ್ಲಿ ವರ್ತೂರು ಸಂತೋಷ್ ಬಳಿಕ ನಟ ಮತ್ತು ರಾಜಕಾರಣಿ ಆದ ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ಸ್ಟಾರ್‌ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕೆಟೇಶ್ ಅವರು ಸೇರಿದ್ದಾರೆ. ಈಗಾಗಲೇ ಜಗ್ಗೇಶ್ ಮತ್ತು ದರ್ಶನ್ ಅವರ ವಿರುದ್ಧ ದೂರುಗಳು ದಾಖಲಾಗಿವೆ.
'ಇದು ಓರಿಜಿನ್ ಹಲಿ ಉಗುರು' ಎಂದ ಜಗ್ಗೇಶ್‌ಗೆ ಸಂಕಷ್ಟ
ಇತ್ತ ಅವಧೂತ ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತ ಫೋಟೊ ವೈರಲ್ ಆಗಿದೆ. ಇತ್ತ ಹುಲಿ ಉಗುರಿನ ಚರ್ಚೆ ಕ್ರಮದ ಮಾತುಗಳು ಕೇಳಿ ಬರುತ್ತಿದ್ದಂತೆ ಈ ಕುರಿತು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಆಗಿವೆ. ಇದು ಸತ್ಯಕ್ಕೆ ದೂರವಾಗಿದೆ. ವನ್ಯಜೀವಿ ಸಂರಕ್ಷನಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಅರಿವಿದೆ ಎಂದು ತಿಳಿಸಿದ್ದಾರೆ. ವಿಶೇಷವೆಂದರೆ ಇಷ್ಟು ಜನರಲ್ಲಿ ತಾವು ನಿಜವಾಗಿಯೂ ಹುಲಿ ಉಗುರು ಧರಿಸಿದ್ದೇವೆ ಎಂದು ಜಗ್ಗೇಶ್ ಅವರನ್ನು ಬಿಟ್ಟು ಬೇರೆ ಯಾರು ಹೇಳಿಲ್ಲ.












Click it and Unblock the Notifications