ಎನ್.ಎ. ಹ್ಯಾರೀಸ್ ಆಯ್ಕೆ ಪ್ರಶ್ನಿಸಿರುವ ಅರ್ಜಿ ವಜಾಗೊಳಿಸಲು ಮನವಿ
ಬೆಂಗಳೂರು, ಜನವರಿ 26: ಕಳೆದ ಚುನಾವಣೆ ವೇಳೆ ಸಲ್ಲಿಸಲಾದ ಫಾರಂ ನಂ. 26ರಲ್ಲಿ ಶಾಂತಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರೀಸ್ ತಮ್ಮ ಆಸ್ತಿ ವಿವರಗಳನ್ನು ಸರಿಯಾಗಿ ಘೋಷಿಸಿಲ್ಲ ಎಂದು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್ ನಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನ ಶಾಂತಿ ನಗರದ ಕಾಂಗ್ರೆಸ್ ಶಾಸಕ ಎನ್. ಎ. ಹ್ಯಾರೀಸ್ ಅನರ್ಹಗೊಳಿಸಿ ನನ್ನನ್ನೇ ವಿಜಯಶಾಲಿ ಎಂದು ಘೋಷಿಸಬೇಕೆಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ. ಶಿವಕುಮಾರ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಸುಪ್ರೀಂಕೋರ್ಟ್‌ನ ಎರಡೂ ತೀರ್ಪುಗಳ ಪರಾಮರ್ಶೆ ನಡೆಸುವುದಾಗಿ ತಿಳಿಸಿ ವಿಚಾರಣೆಯನ್ನು ಇದೇ ಜನವರಿ 29ಕ್ಕೆ ಮುಂದೂಡಿತು.
ಹ್ಯಾರೀಸ್ ಪರ ವಕೀಲರ ವಾದದ ಸಾರಂಶ: ಮೊದಲಿಗೆ ಎನ್. ಎ. ಹ್ಯಾರೀಸ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿಗಳು, ಅಸಮರ್ಪಕ ನಾಮಪತ್ರ ಸ್ವೀಕರಿಸಿದ ಕಾರಣ ಅದು ಪ್ರತಿಸ್ಪರ್ಧಿಯ ಗೆಲುವಿಗೆ ಅಡ್ಡಿ ಉಂಟು ಮಾಡಿದೆ ಎಂಬ ಆರೋಪವನ್ನು ಸಾಬೀತುಪಡಿಸಬೇಕು ಮತ್ತು ಅಂತಹ ಕ್ರಮ ಸೋಲಿಗೆ ಹೇಗೆ ಕಾರಣವಾಯಿತು? ಎಂಬ ನಿಖರ ಅಂಶವನ್ನು ಅರ್ಜಿದಾರರು ತಮ್ಮ ದಾವೆಯಲ್ಲಿ ಕಾಣಿಸಬೇಕಿತ್ತು. ಆದರೆ ಕೆ. ಶಿವಕುಮಾರ್ ಸಲ್ಲಿಸಿರುವ ಈ ಚುನಾವಣಾ ತಕರಾರು ಅರ್ಜಿಯಲ್ಲಿ ಇಂತಹ ಯಾವುದೇ ಅಂಶಗಳು ಇಲ್ಲದ ಕಾರಣ ಈ ನಿರರ್ಥಕ ಅರ್ಜಿ ತಿರಸ್ಕರಿಸಬೇಕು ಎಂದರು.
ಅಲ್ಲದೆ, ಅರ್ಜಿದಾರರು ಹ್ಯಾರೀಸ್ ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಮತ್ತು ಮಾನಸಿಕ ಯಾತನೆ ಉಂಟು ಮಾಡುವ ದೃಷ್ಟಿಯಿಂದ ಈ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ದಾವೆಯಲ್ಲಿ ವಿವರಿಸಿರುವ ಅಂಶಗಳ ಆಧಾರದಡಿ ಹ್ಯಾರೀಸ್ ಅವರ ವಿರುದ್ಧದ ಆರೋಪಗಳ ವಿಚಾರಣೆಗಾಗಿ ಪ್ರತಿವಾದಿಗಳನ್ನು ಅರೆ ಅಪರಾಧಿಕ ನ್ಯಾಯಿಕ ಪ್ರಕ್ರಿಯೆಗೆ ಒಳಪಡಿಸಬಾರದು.
ಈ ಹಂತದಲ್ಲಿಯೇ ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನ ಪೂರ್ವ ನಿದರ್ಶನದ ತೀರ್ಪೊಂದನ್ನು ನೀಡಿದರು. ಅರ್ಜಿದಾರರ ಪರ ವಕೀಲರು ಅವರೂ ಇದಕ್ಕೆ ಪ್ರತಿಯಾಗಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ಸುಪ್ರೀಂಕೋರ್ಟ್‌ನ ಮತ್ತೊಂದು ಪೂರ್ವ ನಿದರ್ಶನದ ತೀರ್ಪನ್ನು ನೀಡುತ್ತಿರುವುದಾಗಿ ತಿಳಿಸಿದರು.
ಅರ್ಜಿಯ ಅಂಶಗಳೇನು?: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಂತಿ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎನ್. ಎ. ಹ್ಯಾರೀಸ್ ತಮ್ಮ ಚರ ಮತ್ತು ಸ್ಥಿರಾಸ್ತಿಗಳ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಿಲ್ಲ.
ಅವರ ಸುಳ್ಳು ಘೋಷಣೆಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಚರ ಮತ್ತು ಸ್ಥಿರಾಸ್ತಿಗಳನ್ನು ವಾಸ್ತವಕ್ಕಿಂತಲೂ ಕಡಿಮೆ ಅಂದಾಜಿನಲ್ಲಿ ದಾಖಲಿಸಿದ್ದಾರೆ. ಹೀಗಾಗಿ, ಈ ಅಸಮರ್ಪಕ ನಾಮಪತ್ರ ಸ್ವೀಕಾರದ ಕಾರಣದಿಂದಾಗಿ ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿ ನನ್ನ ಸೋಲಿಗೆ ಕಾರಣವಾಗಿದೆ. ಹೀಗಾಗಿ, ಅವರನ್ನು ಅನರ್ಹಗೊಳಿಸಿ ನನ್ನನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಶಾಂತಿ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎನ್. ಎ. ಹ್ಯಾರೀಸ್ 61030 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಅವರ ಎದುರಾಳಿಯಾಗಿದ್ದ ಬಿಜೆಪಿಯ ಕೆ. ಶಿವಕುಮಾರ್ 53,905 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.












Click it and Unblock the Notifications