Breaking News: ಮುಡಾ ಹಗರಣದಲ್ಲಿ ಇಡಿ ನೋಟಿಸ್, ಸಚಿವ ಬೈರತಿ ಸುರೇಶ್ ಸ್ಪಷ್ಟನೆ
ಬೆಂಗಳೂರು, ಅಕ್ಟೋಬರ್ 03: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದರಾಮಯ್ಯ ಎ-1 ಆರೋಪಿ. ಗುರುವಾರ ಇಡಿ ಅಧಿಕಾರಿಗಳು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆಯನ್ನು ಬೆಂಗಳೂರಿನ ಇಡಿ ಕಛೇರಿಯಲ್ಲಿ ನಡೆಸುತ್ತಿದ್ದಾರೆ.
ಈ ನಡುವೆ ನಗರಾಭಿವೃದ್ಧಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ ಎಂಬ ಸುದ್ದಿ ಹಬ್ಬಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿರುವ ನಾಯಕರಲ್ಲಿ ಬೈರತಿ ಸುರೇಶ್ ಸಹ ಒಬ್ಬರು.

ಗುರುವಾರ ಬೆಳಗ್ಗೆ ಹೆಬ್ಬಾಳದ ನಿವಾಸಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿ ಬೈರತಿ ಸುರೇಶ್‌ಗೆ ನೋಟಿಸ್ ನೀಡಿದ್ದಾರೆ. ನವರಾತ್ರಿ ಬಳಿಕ ವಿಚಾರಣೆಗೆ ಬರುತ್ತೇನೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಸಚಿವ ಬೈರತಿ ಸುರೇಶ್ ಸ್ಪಷ್ಟನೆ: ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಕುರಿತು ಸಚಿವರು ಸ್ಪಷ್ಟನೆಯನ್ನು ನೀಡಿದ್ದಾರೆ.
"ಜಾರಿ ನಿರ್ದೇಶನಾಲಯದ ಯಾವುದೇ ಅಧಿಕಾರಿಗಳು ಮನೆಗೆ ಬಂದಿಲ್ಲ. ನನಗೆ ನೋಟಿಸ್ ನೀಡಿಲ್ಲ. ನನ್ನನ್ನು ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದೆ. ಮಾಧ್ಯಮಗಳು ನನ್ನ ಸ್ಪಷ್ಟನೆಯನ್ನು ಕೇಳಿ ಆ ಬಳಿಕ ಸುದ್ದಿ ಪ್ರಸಾರ ಮಾಡಬೇಕು" ಎಂದು ಹೇಳಿದ್ದಾರೆ.
"ಮನೆಯಿಂದಲೇ ಇಲ್ಲಿಗೆ ಆಗಮಿಸುತ್ತಿದ್ದೇನೆ. ನನ್ನ ಮನೆಗೆ ಯಾವುದೇ ಅಧಿಕಾರಿ ಬಂದಿಲ್ಲ. ನನಗೆ ಯಾವುದೇ ನೋಟಿಸ್ ಬಂದಿಲ್ಲ" ಎಂದು ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು.
ಒಂದು ಕಡೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಜನಪ್ರತಿನಿಧಿಗಳ ಕೋರ್ಟ್ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತರು ತನಿಖೆ ನಡೆಸಿ 3 ತಿಂಗಳಿನಲ್ಲಿ ವರದಿ ನೀಡಬೇಕು ಎಂದು ಆದೇಶಿಸಿದ್ದು, ತನಿಖೆ ಆರಂಭವಾಗಿದೆ.
ಮತ್ತೊಂದು ಕಡೆ ಸ್ನೇಹಮಯಿ ಕೃಷ್ಣ ದೂರಿನ ಅನ್ವಯ ಜಾರಿ ನಿರ್ದೇಶನಾಲಯ ಸಿದ್ದರಾಮಯ್ಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ಈ ಕುರಿತ ತನಿಖೆಯೂ ಆರಂಭವಾಗಿದ್ದು, ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಛೇರಿಯಲ್ಲಿ ಸ್ನೇಹಮಯಿ ಕೃಷ್ಣ ವಿಚಾರಣೆಯನ್ನು ಗುರುವಾರ ನಡೆಸಲಾಗುತ್ತಿದೆ.
ಇಡಿಯಲ್ಲಿಯೂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ವಿರೋಧ ಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, "ಬಿ. ಎಸ್. ಯಡಿಯೂರಪ್ಪ ಅವರು ಅಕ್ರಮವಾಗಿ ಡಿನೋಟಿಫೈ ಮಾಡಿದ್ದರು, ಆದರೆ ಇಲ್ಲಿ ಇಡೀ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ. ನಾನೇನಾದರೂ ಮುಡಾಗೆ ಆದೇಶ ಮಾಡಿದ್ದೇನಾ?, ಸೂಚನೆ ನೀಡಿದ್ದೇನಾ?, ವಿನಾಕಾರಣ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ತಪ್ಪೇ ಮಾಡದಿರುವ ನಾನು ರಾಜೀನಾಮೆ ಯಾಕೆ ನೀಡಬೇಕು?" ಎಂದು ಪ್ರಶ್ನೆ ಮಾಡಿದ್ದಾರೆ.
ಮುಡಾ ವಿವಾದದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿದ್ದಾರೆ. ಗುರುವಾರ ಅವರು ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಅಗ್ರಪೂಜೆಯೊಂದಿಗೆ 2024ರ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಸಾಹಿತಿ ಹಂ. ಪ. ನಾಗರಾಜಯ್ಯ ಮೈಸೂರು ದಸರಾ 2024 ಉದ್ಘಾಟಿಸಿದರು.












Click it and Unblock the Notifications