'ಸಂಭ್ರಮ ಶನಿವಾರ' ಶಾಲಾ ಮಕ್ಕಳಿಗೆ ಬ್ಯಾಗ್ ರಹಿತ ದಿನ
ಬೆಂಗಳೂರು, ಜುಲೈ 05; 'ಸಂಭ್ರಮ ಶನಿವಾರ' ಎಂಬ ಹೆಸರಿನಲ್ಲಿ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನದ ಆಚರಣೆ ಕುರಿತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ನಿರ್ದೇಶಕರು ಡಿಎಸ್‌ಆರ್‌ಇಟಿ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರದ ಆದೇಶ ದಿನಾಂಕ 03/05/2019. ಸುತ್ತೋಲೆ 28/10/2022 ಮತ್ತು ಎಸ್. ಸುರೇಶ್ ಕುಮಾರ್ ಶಾಸಕರು ಹಾಗೂ ಮಾಜಿ ಸಚಿವರು ರಾಜಾಜಿನಗರ ವಿಧಾನಸಭಾ ಕ್ಷೇತ್ರ ರವರ ಪತ್ರ ಸಂಖ್ಯೆಯನ್ನು ಉಲ್ಲೇಖಿಸಿದ್ದಾರೆ.

ಈ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿರದೆ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಈ ಹಿಂದೆ ಆದೇಶಿಸಲಾಗಿದೆ.
2023-24 ನೇ ಸಾಲಿನಲ್ಲಿ ಪ್ರತಿ ತಿಂಗಳ 3 ನೇ ಶನಿವಾರ ಶಾಲಾ ಹಂತದಲ್ಲಿ ಸದರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಿಳಿಸಿದೆ. ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್‌ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಇದಕ್ಕಾಗಿ ಸಿದ್ಧಪಡಿಸಲಾಗಿದೆ ಎಂದು ಸುತ್ತೋಲೆ ಹೇಳಿದೆ.
ಈ ಕುರಿತು ಜಿಲ್ಲಾ, ಬ್ಲಾಕ್ ಹಾಗೂ ಕ್ಲಸ್ಟರ್ ಮಟ್ಟದಲ್ಲಿ ನಡೆಸಲಾಗುವ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಸಭೆಗಳಲ್ಲಿ ಮತ್ತು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಗತ್ಯ ಮಾರ್ಗದರ್ಶನ ನೀಡುವುದು. ವಿದ್ಯಾರ್ಥಿ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಕೈಪಿಡಿಯನ್ನು DSERT ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದು, ಸದರಿ ಕಲಿಕಾ ಸಾಮಗ್ರಿಗಳನ್ನು ಉಪಯೋಗಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಲ್ಲಾ ಶಿಕ್ಷಕರಿಗೆ ಮಾಹಿತಿ ಒದಗಿಸುವುದು ಎಂದು ತಿಳಿಸಿದೆ.
ಸಂಭ್ರಮ ಶನಿವಾರ; 'ಸಂಭ್ರಮ ಶನಿವಾರ' ದಿನದಂದು ಜಿಲ್ಲಾ ಹಂತ ಮತ್ತು ಬ್ಲಾಕ್ ಹಂತದ ಎಲ್ಲಾ ಅಧಿಕಾರಿಗಳು ಹಾಗೂ CRP ಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅನುಪಾಲಿಸುವುದು ಹಾಗೂ ಅಗತ್ಯ ಮಾರ್ಗದರ್ಶನ ನೀಡುವುದು. ಕಾರ್ಯಕ್ರಮದ ಯಶಸ್ಸಿಗೆ ತಮ್ಮೆಲ್ಲರ ಪಾಲ್ಗೊಳ್ಳುವಿಕೆಯನ್ನು ಅಪೇಕ್ಷಿಸಲಾಗಿದೆ ಎಂದು ಸುತ್ತೋಲೆ ಹೇಳಿದೆ.
2023-24 ನೇ ಶೈಕ್ಷಣಿಕ ಸಾಲಿನ 'ಸಂಭ್ರಮ ಶನಿವಾರ' ಆಚರಣೆಗೆ ಸಂಬಂಧಿಸಿದ ಜಿಲ್ಲಾ ಹಂತದ ಕ್ರೂಢೀಕೃತ ವರದಿಯನ್ನು ತಿಂಗಳುವಾಡು ಸಿದ್ಧಪಡಿಸಿ DSERT ಕಛೇರಿಯ ಇ.ವಿ.ಜಿ ಶಾಖೆಯ [email protected] ಮೇಲ್ ಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.
ಬ್ಯಾಗ್ ರಹಿತ ದಿನದ ಕಲ್ಪನೆ; ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ 'ಬ್ಯಾಗ್ ರಹಿತ ದಿನ'ವನ್ನು ಆಚರಿಸುವ ಕುರಿತು ಕೆಲವು ಶಿಫಾರಸು ಮಾಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು 6 ರಿಂದ 8ನೇ ತರಗತಿಯ ಅವಧಿಯಲ್ಲಿ, ರಾಜ್ಯಗಳು ಮತ್ತು ಸ್ಥಳೀಯ ಸಮುದಾಯಗಳು ನಿರ್ಧರಿಸಿದಂತೆ ಮತ್ತು ಸ್ಥಳೀಯ ಕೌಶಲ ಅಗತ್ಯಗಳಿಗೆ ಪೂರಕವಾಗಿ ಮರಗೆಲಸ, ವಿದ್ಯುತ್ ಕೆಲಸ, ಲೋಹದ ಕೆಲಸ, ತೋಟಗಾರಿಕೆ, ಕುಂಬಾರಿಕೆ ಮುಂತಾದ ಪ್ರಮುಖ ವೃತ್ತಿಪರ ಕರಕೌಶಲ್ಯಗಳ ಸಮೀಕ್ಷೆ ಮತ್ತು ಮಾಡಿ ಕಲಿಯುವ ಅನುಭವವನ್ನು ನೀಡುವ ಒಂದು ಮೋಜಿನ ಕೋರ್ಸ್ ಅನ್ನು ತೆಗೆದುಕೊಳ್ಳುತ್ತಾನೆ.
ಶಿಕ್ಷಣ ನೀತಿಯ ಚೌಕಟ್ಟನ್ನು ರೂಪಿಸುವಾಗ 6-8ನೇ ತರಗತಿಗಳಿಗಾಗಿ ಅಭ್ಯಾಸ ಆಧಾರಿತ ಪಠ್ಯಕ್ರಮವನ್ನು NCERT ಸೂಕ್ತವಾಗಿ ವಿನ್ಯಾಸಗೊಳಿಸುತ್ತದೆ. 6-8 ನೇ ತರಗತಿಯ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು 10 ದಿನಗಳ ಬ್ಯಾಗ್ ರಹಿತ ಅವಧಿಯಲ್ಲಿ ಭಾಗವಹಿಸುತ್ತಾರೆ, ಅಲ್ಲಿ ಅವರು ಸ್ಥಳೀಯ ವೃತ್ತಿಪರ ತಜ್ಞರಾದ ಬಡಗಿಗಳು, ತೋಟಗಾರರು, ಕುಂಬಾರರು, ಕಲಾವಿದರು ಮುಂತಾದವರೊಂದಿಗೆ ತರಬೇತಿ ಪಡೆಯುತ್ತಾರೆ. ವೃತ್ತಿಪರ ವಿಷಯಗಳನ್ನು ಕಲಿಯಲು ಇದೇ ರೀತಿಯ ತರಬೇತಿ (internship) ಅವಕಾಶಗಳು, (ರಜಾ ಅವಧಿಗಳು ಸೇರಿದಂತೆ) 6-12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಬಹುದು. ಆನ್‌ಲೈನ್ ವಿಧಾನದಲ್ಲಿಯೂ ಸಹ ವೃತ್ತಿಪರ ಕೋರ್ಸಗಳು ಲಭ್ಯವಾಗುವಂತೆ ಮಾಡಲಾಗುವುದು.
ಕಲೆ, ರಸಪ್ರಶ್ನೆಗಳು, ಕ್ರೀಡೆಗಳು ಮತ್ತು ವೃತ್ತಿಪರ ಕರಕೌಶಲ್ಯವನ್ನು ವಸ್ತುಗಳನ್ನು ಒಳಗೊಂಡ ವಿವಿಧ ರೀತಿಯ ಪುಷ್ಟೀಕರಣ ಚಟುವಟಿಕೆಗಳಿಗಾಗಿ ವರ್ಷವಿಡೀ ಬ್ಯಾಗ್ ರಹಿತ ದಿನಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ಪ್ರಾಮುಖ್ಯತೆಯ ಸ್ಥಳಗಳು/ ಸ್ಮಾರಕಗಳಿಗೆ ಭೇಟಿ ನೀಡುವುದು, ಸ್ಥಳೀಯ ಕಲಾವಿದರು ಮತ್ತು ಕುಶಲಕರ್ಮಿಗಳನ್ನು ಭೇಟಿ ಮಾಡುವುದು ಮತ್ತು ಅವರ ಗ್ರಾಮ/ ತಹಸಿಲ್/ ಜಿಲ್ಲೆ/ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ಮಕ್ಕಳಿಗೆ ಶಾಲೆಯ ಹೊರಗಿನ ಚಟುವಟಿಕೆಗಳ ಅನುಭವ ಒದಗಿಸಲಾಗುವುದು.












Click it and Unblock the Notifications