DK Shivakumar: ಎಚ್.ಡಿ ಕುಮಾರಸ್ವಾಮಿ ಜೊತೆ ತಂದಿಡ ಬೇಡಿ, ಮನೆಹಾಳು ಕೆಲಸ ಬೇಡ ಎಂದ ಡಿ.ಕೆ ಶಿವಕುಮಾರ್!
ರಾಜಕೀಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರಗಳು ನಡೆಯುವುದು ಇದೆ. ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವು ತಾರಕಕ್ಕೇರಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ನಡುವಿನ ಮುಸುಕಿನ ಗುದ್ದಾಟವು ಬಹಿರಂಗವಾಗಿದ್ದು, ಡಿ.ಕೆ ಶಿವಕುಮಾರ್ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರು ಸಹ ಹೇಳಿಕೆ - ಪ್ರತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ, ಇದೀಗ ಡಿ.ಕೆ ಶಿವಕುಮಾರ್ ಅವರು ಎಚ್.ಡಿ ಕುಮಾರಸ್ವಾಮಿ ಮತ್ತು ನನ್ನ ನಡುವೆ ತಂದಿಡುವ ಕೆಲಸವನ್ನು ಮಾಡಬೇಡಿ ಎಂದಿದ್ದಾರೆ.
ಹೌದು, ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಅಲ್ಲದೇ ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ನಡೆಯಲಿದೆ. ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಮುಖ್ಯಮಂತ್ರಿ ಹುದ್ದೆ ವಿಚಾರಕ್ಕೆ ಸಂಬಂಧಿಸಿದಂತೆ 2.5 ವರ್ಷದ ಒಪ್ಪಂದವಾಗಿದೆ ಎನ್ನುವುದು ಇದೀಗ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿವೆ. ಅಲ್ಲದೇ ಇದರ ನಡುವೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಕೊಟ್ಟಿರುವ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ಕುಮಾರಸ್ವಾಮಿ ಅವರ ವಿಚಾರದಲ್ಲಿ ಶಿವಕುಮಾರ್ ಅವರು ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ.

ನಮ್ಮಿಬ್ಬರ ನಡುವೆ ತಂದಿಡುವ ಕೆಲಸ ಮಾಡಬೇಡಿ!
ಎಚ್.ಡಿ ಕುಮಾರಸ್ವಾಮಿ ಹಾಗೂ ನನ್ನ ನಡುವೆ ತಂದಿಡುವ ಕೆಲಸ ಮಾಡಬೇಡಿ. ಈ ಮನೆಹಾಳು ಕೆಲಸ ಯಾಕೆ ಮಾಡುತ್ತೀರಿ ಎಂದೇ ಖಾರವಾಗಿಯೇ ಡಿ.ಕೆ ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ. ಇದು ಭಾರೀ ಅಚ್ಚರಿಗೆ ಕಾರಣವಾಗಿದೆ. ಇಬ್ಬರು ನಾಯಕರು ರಾಜಕೀಯ ವಿಚಾರವಾಗಿ ವಾಕ್ಸಮರ ನಡೆಸುವುದು ಇದೆ. ಆದರೆ ಇದೀಗ ಎಚ್.ಡಿ ಕುಮಾರಸ್ವಾಮಿ ಅವರು ಹೇಳದ ವಿಚಾರವನ್ನು ಯಾಕೆ ಹೇಳುತ್ತೀರಿ ಎಂದು ಕೆಲವು ಪತ್ರಕರ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟಕ್ಕೂ ಈ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದೇನು ಎನ್ನುವ ವಿವರ ನೋಡೋಣ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ "ಅಮೋಘ ಕರ್ನಾಟಕ" ಚಾನೆಲ್‌ನ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಡಿ.ಕೆ ಶಿವಕುಮಾರ್ ಅವರು, ಪತ್ರಕರ್ತರೊಬ್ಬರಿಗೆ ಕುಮಾರಸ್ವಾಮಿ ಅವರು ಹೇಳದೆ ಇದ್ದರೂ ಯಾಕೆ ಅವರ ಹೆಸರನ್ನು ಹೇಳುತ್ತಿದ್ದೀರಿ, ಒಬ್ಬರಿಗೊಬ್ಬರಿಗೆ ತಂದಾಕಿ ಮನೆಹಾಳು ಕೆಲಸ ಮಾಡುತ್ತಿದ್ದೀರ ನೀವು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕುಮಾರಸ್ವಾಮಿ ಅವರು ಮಹತ್ವದ ಕ್ರಾಂತಿ ಎಂದು ಹೇಳಿರಬಹುದು. ರಾಜಕೀಯವಾಗಿ ಮಾತನಾಡಿರಬಹುದು. ಆದರೆ ಅದೆಲ್ಲಾ ಮುಖ್ಯವಲ್ಲ, " ಕೇಂದ್ರ ಸಚಿವ ಅಮಿತ್ ಶಾ ಅವರ ಜೊತೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಟಚ್‌ನಲ್ಲಿ ಇದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದು ನೀವು (ಮಾಧ್ಯಮದವರು) ಪ್ರಶ್ನೆ ಮಾಡುತ್ತಿದ್ದೀರಿ. ಯಾವ ದಾಖಲೆಯ ಮೇಲೆ ಇದನ್ನು ಹೇಳುತ್ತಿದ್ದೀರಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ.
ಈ ರೀತಿಯ ಕೆಲಸ ಮಾಡಿ ನೀವು ನಿಮ್ಮ ಗೌರವ ಕಳೆದುಕೊಳ್ಳಬೇಡಿ. ನಾವು 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇವೆ. ಮುಂದೆ ಈ ರೀತಿ ತಪ್ಪುಗಳನ್ನು ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಮಾಧ್ಯಮಗಳಿಗೆ ಡಿ.ಕೆ ಶಿವಕುಮಾರ್ ಅವರು ಖಾರವಾಗಿಯೇ ರಿಯಾಕ್ಟ್ ಮಾಡಿದ್ದಾರೆ.












Click it and Unblock the Notifications