ಬಿಜೆಪಿಯದ್ದು ಒಡೆದು ಆಳುವ ಸಂಸ್ಕೃತಿ: ಪ್ರತಾಪ್ ಸಿಂಹ ವಿರುದ್ಧ ಸಂಸದ ಡಿಕೆ ಸುರೇಶ್ ಅಸಮಾಧಾನ
ಸಂಸದ ಪ್ರತಾಪ್ ಸಿಂಹ ಮತ್ತವರ ಪಕ್ಷ ಬಿಜೆಪಿಯವರದ್ದು ಒಡೆದು ಆಳುವ ಸಂಸ್ಕೃತಿ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರತಾಪ್ ಸಿಂಹ ಟೀಕೆ ಮಾಡಿರುವ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್‌ನಲ್ಲಿ ಒಡೆದು ಆಳುವ ಸಂಸ್ಕೃತಿ ಇಲ್ಲ, ಬಿಜೆಪಿಯವರು ಒಡೆದು ಆಳುವ ಸಂಸ್ಕೃತಿ ಇಟ್ಟುಕೊಂಡಿದ್ದು ಮನೆ ಹಾಳು ಮಾಡುತ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ಮುಸ್ಲಿಮರನ್ನು ವಿರೋಧಿಸುತ್ತಾರೆ ಆದರೆ ಈಗ ಇದ್ದಕ್ಕಿದ್ದಂತೆ ಮುಸ್ಲಿಮರ ಮೇಲೆ ಪ್ರೀತಿ ಬಂದಿದೆ. ಅವರು ಮೊದಲಿನಿಂದ ಯಾವ ತತ್ವ ಸಿದ್ದಾಂತ ಇಟ್ಟುಕೊಂಡಿದ್ದಾರೆ ಅದರಿಂದ ಆಚೆ ಬರುವುದು ಬೇಡ. ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಪಕ್ಷ, ನಾವು ಕೊಟ್ಟಿರುವ ಗ್ಯಾರಂಟಿ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.

ರೈತರ ಹಿತದೃಷ್ಟಿಯಿಂದ ಚರ್ಚೆಯಾಗಲಿ
ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡುವ ವಿಚಾರವಾಗಿ ಮಾತನಾಡಿದ ಡಿಕೆ ಸುರೇಶ್, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ. ಸರ್ಕಾರ ಎಲ್ಲಾ ರೀತಿಯಲ್ಲಿ ಯೋಚಿಸಿ ಏನು ತೀರ್ಮಾನ ಮಾಡುತ್ತೇ ನೋಡಬೇಕು. ರೈತರಿಗೆ ಕೆಲಸಕ್ಕೆ ಬಾರದ ಜಾನುವಾರುಗಳನ್ನು ಬೇರೆಯದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ದೃಷ್ಠಿಯಿಂದ ಹೆಚ್ಚಿನ ಚರ್ಚೆಯಾಗಬೇಕಿದೆ ಎಂದು ಹೇಳಿದರು.
ಪ್ರತಾಪ್ ಸಿಂಹ ಹೇಳಿಕೆಗೆ ಭಾರಿ ಆಕ್ರೋಶ
ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕಿಸುವ ಭರದಲ್ಲಿ ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿ ಖಾತೆಗೆ ಪ್ರತಿ ತಿಂಗಳು 2000 ರುಪಾಯಿ ಹಾಕುವುದಾಗಿ ಕಾಂಗ್ರೆಸ್ ಹೇಳಿದೆ. ಹಿಂದೂಗಳಲ್ಲಿ ಅತ್ತೆ-ಸೊಸೆ ನಡುವೆ ಯಜಮಾನಿ ಯಾರು ಎನ್ನುವ ಪೈಪೋಟಿ ಶುರವಾದರೆ, ಮುಸ್ಲಿಮರಲ್ಲಿ ಇಬ್ಬರು ಮೂವರು ಹೆಂಡತಿಯರು ಇರುತ್ತಾರೆ ಅವರಲ್ಲಿ ಯಜಮಾನಿ ಯಾರು ಎಂದು ತೀರ್ಮಾನಿಸುತ್ತಾರೆ ಎಂದು ಪ್ರಶ್ನೆ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಪ್ರತಾಪ್ ಸಿಂಹ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಛತ್ರಪತಿ ಶಿವಾಜಿ ಮಹಾರಾಜರಿಗೂ 4 ಹೆಂಡತಿಯರಿದ್ದರು, ಈ ಬಗ್ಗೆ ಚರ್ಚೆಗೆ ಬನ್ನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸವಾಲು ಹಾಕಲಾಗಿದೆ. ಇನ್ನು ಉಚಿತ ಪ್ರಯಾಣ, ಯುವ ನಿಧಿ ಯೋಜನೆ, ಉಚಿತ ವಿದ್ಯುತ್ ಬಗ್ಗೆ ಕೂಡ ಪ್ರತಾಪ್ ಸಿಂಹ ಟೀಕಿಸಿದ್ದರು.












Click it and Unblock the Notifications