Property: ಬೆಂಗಳೂರಿನಲ್ಲಿ ಯಾರದ್ದು ಎಷ್ಟು ಆಸ್ತಿ: ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 09: ಭ್ರಷ್ಟಾಚಾರ ನಿಯಂತ್ರಿಸಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ಅನೇಕ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಮನೆ ಕಟ್ಟಬೇಕಾದರೆ ಕಟ್ಟಡ ನಕ್ಷೆ ಅನುಮೋದನೆ ಪಡೆಯಲು ಕಚೇರಿ ಹಾಗೂ ಅಧಿಕಾರಿಗಳ ಸುತ್ತ ಅಲೆಯಬೇಕಾಗುತ್ತಿತ್ತು. ಹೀಗಾಗಿ ನಂಬಿಕೆ ನಕ್ಷೆ ಯೋಜನೆ ಜಾರಿಗೆ ತಂದಿದ್ದು 50X80 ನಿವೇಶನದಲ್ಲಿ ಮನೆ ಕಟ್ಟುವವರು ನಿಯೋಜಿತ ಇಂಜಿನಿಯರ್ ಗಳ ಬಳಿ ಕಟ್ಟಡ ನಕ್ಷೆಗೆ ಅನುಮೋದನೆ ಪಡೆಯಬಹುದು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಈ ಹಿಂದೆ ತೆರಿಗೆ ಪಾವತಿಗೆ ಸ್ವಯಂ ಘೋಷಣೆ ಯೋಜನೆ ಅವಕಾಶ ನೀಡಿದೆವು. ಕೇವಲ 10% ಜನ ಮಾತ್ರ ತಮ್ಮ ಆಸ್ತಿ ಮೌಲ್ಯವನ್ನು ಸರಿಯಾಗಿ ಪ್ರಕಟಿಸಿದರು. ಉಳಿದವರು ಸ್ಥಳೀಯ ಅಧಿಕಾರಿಗಳ ಜೊತೆಗೂಡಿ ತಮ್ಮ ಆಸ್ತಿ ಮೌಲ್ಯಕ್ಕಿಂತ ಕಡಿಮೆ ತೋರಿಸಿ ತೆರಿಗೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ನಾವು ಬೆಂಗಳೂರಿನ ಆಸ್ತಿಗಳ ಸಮೀಕ್ಷೆ ಮಾಡುತ್ತಿದ್ದು, ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಪತ್ತೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ದೆಹಲಿಯಲ್ಲಿ ತೆರಿಗೆ ಮೂಲಕ ಸಂಗ್ರಹವಾಗುವ ಆದಾಯ ಕೇವಲ 2 ಸಾವಿರ ಕೋಟಿ ಮಾತ್ರ. ಆದರೆ ನಮ್ಮ ಸರ್ಕಾರ ಬಂದ ನಂತರ ನಾವು ಓಟಿಎಸ್ ಅವಕಾಶ ಕಲ್ಪಿಸಿದ ಕಾರಣಕ್ಕೆ ಬೆಂಗಳೂರಿನಲ್ಲಿ ತೆರಿಗೆ ಸಂಗ್ರಹ 6-7 ಸಾವಿರ ಕೋಟಿಗೆ ತಲುಪಿದೆ. ಬೆಂಗಳೂರಿನ ರಸ್ತೆಗುಂಡಿ ವಿಚಾರವಾಗಿ ಸಾಕಷ್ಟು ಟೀಕೆ ಮಾಡುತ್ತಾರೆ. ಆದರೆ ದೆಹಲಿಯಲ್ಲಿರುವ ನನ್ನ ಮನೆ ಮುಂದಿನ ರಸ್ತೆಯಲ್ಲಿ 100 ಮೀಟರ್ ವ್ಯಾಪ್ತಿಯಲ್ಲೇ 70 ರಸ್ತೆಗುಂಡಿಗಳಿವೆ. ಆದರೂ ದೆಹಲಿ ಹಾಗೂ ಇತರೆ ನಗರಗಳಲ್ಲಿರುವ ರಸ್ತೆಗುಂಡಿಗಳು ಸುದ್ದಿಯಾಗುವುದಿಲ್ಲ ಎಂದರು.
ರಸ್ತೆಗುಂಡಿ ಎಲ್ಲಾ ನಗರಗಳಲ್ಲೂ ಇವೆ. ಆದರೂ ಬೆಂಗಳೂರಿನ ಬಗ್ಗೆ ಹೆಚ್ಚು ಟೀಕೆಗಳಾಗುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಟೀಕೆಗಳನ್ನು ಸ್ವಾಗತಿಸುತ್ತೇನೆ. ರಾಜಕಾರಣಿಗಳು ಟೀಕೆಗಳಿಗೆ ಹೆದರಬಾರದು. ಜನರ ಧ್ವನಿಯನ್ನು ಆಲಿಸಬೇಕು. ಜನ ಟೀಕೆ ಮಾಡಿದಾಗ ಮಾತ್ರ ನಾವು ನಮ್ಮ ತಪ್ಪು ತಿದ್ದಿಕೊಳ್ಳಲು ಸಾಧ್ಯ. ಇಡೀ ದೇಶದಲ್ಲಿ ಯಾವುದೇ ನಗರದ ಸಚಿವರು ತಮ್ಮ ಸಾರ್ವಜನಿಕರಿಗೆ ಕರೆ ನೀಡಿ ರಸ್ತೆ ಗುಂಡಿ, ಕಸ ಬಗ್ಗೆ ಮಾಹಿತಿ ನೀಡಿ ಎಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರಾ? ಆ ಕೆಲಸವನ್ನು ನಾವು ಮಾಡಿದ್ದೇನೆ. ಪರಿಣಾಮ ನಮ್ಮ ಅಧಿಕಾರಿಗಳಿಗೆ 13 ಸಾವಿರ ರಸ್ತೆಗುಂಡಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಅವುಗಳನ್ನು ಮುಚ್ಚುತ್ತಿದ್ದೇವೆ.
ಇದು ತಕ್ಷಣವೇ ಬಗೆಹರಿಯುವುದಿಲ್ಲ. ನಾನು ಈ ಇಲಾಖೆ ಜವಾಬ್ದಾರಿಯನ್ನು ಬಹಳ ಆಸಕ್ತಿಯಿಂದ ವಹಿಸಿಕೊಂಡಿದ್ದೇನೆ. ಬೆಂಗಳೂರಿನಲ್ಲಿ ಓದಿ, ವಾಸ ಮಾಡಿ, ಕೆಲಸ ಮಾಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಬೆಂಗಳೂರಿಗೆ ಏನಾದರೂ ಕೊಡುಗೆ ನೀಡಬೇಕು ಎಂದು ಪಣತೊಟ್ಟಿದ್ದೇನೆ. ನನ್ನ ಕೆಲಸಗಳು ಇಂದು ಜನರ ಕಣ್ಣಿಗೆ ಕಾಣದೇ ಇರಬಹುದು. ಆದರೆ ಆದರೆ ಮುಂದಿನ 10 ವರ್ಷಗಳ ನಂತರ ಬೆಂಗಳೂರಿಗೆ ನನ್ನ ಕೊಡುಗೆ ಏನು ಎಂದು ಅರ್ಥವಾಗುತ್ತದೆ. ಜನ ನನ್ನನ್ನು ಸ್ಮರಿಸುತ್ತಾರೆ ಎಂದು ತಿಳಿಸಿದರು.
ಟನಲ್ ರಸ್ತೆಗೆ ಸಾಕಷ್ಟು ವಿರೋಧವಿದೆ, ಸಾರ್ವಜನಿಕ ಸಾರಿಗೆ ಉತ್ತಮ ಆಯ್ಕೆ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ನೀವು ಎಲ್ಲರನ್ನು ತೃಪ್ತಿಪಡಿಸಲು ಆಗುವುದಿಲ್ಲ. ಟೀಕೆ ಇದ್ದೇ ಇರುತ್ತದೆ. ಸಾರ್ವಜನಿಕ ಸಾರಿಗೆ ಉತ್ತಮ ಆಯ್ಕೆಯೆಂಬುದು ನಿಜ. ಹಾಗಾದರೆ ಇನ್ನು ಎಷ್ಟು ಸಾರ್ವಜನಿಕ ಸಾರಿಗೆಗೆ ವಾಹನ ಸೇರಿಸಬೇಕು? 1 ಸಾವಿರ ಸಾಕೇ? ನಾನು ಸೇರಿಸಲು ಸಿದ್ಧ. ಜನರೆಲ್ಲರೂ ಬಸ್ ನಲ್ಲಿ ಪ್ರಯಾಣ ಆರಂಭಿಸುತ್ತಾರಾ? ಹೀಗಾಗಿ ಟನಲ್ ಹೊರತಾಗಿ ಪರ್ಯಾಯ ಪರಿಹಾರ ಏನಿದೆ? ಇದೇ ಕಾರಣಕ್ಕೆ ನಾನು ಟನಲ್ ರಸ್ತೆಗೆ ಮುಂದಾಗಿದ್ದೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.












Click it and Unblock the Notifications