ಚನ್ನಪಟ್ಟಣ ಟಿಕೆಟ್‌ಗಾಗಿ ಬಿಜೆಪಿ-ಜೆಡಿಎಸ್‌ ನಡುವೆ ಫೈಟ್: ಕಾಂಗ್ರೆಸ್‌ ಅಭ್ಯರ್ಥಿ ಘೋಷಿಸಿದ ಡಿ ಕೆ ಶಿವಕುಮಾರ್‌

ಬೆಂಗಳೂರು, ಆಗಸ್ಟ್ 30:‌ ಚನ್ನಪಟ್ಟಣಕ್ಕಾಗಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಯಲ್ಲಿ ತಾನೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತೊಮ್ಮೆ ಹೇಳಿದರು. ಬಿ ಫಾರ್ಮ್ ಕೊಡೋನು ನಾನೇ, ಅದರ ಮೇಲೆ ಸಹಿ ಮಾಡೋನು ನಾನೇ ಮತ್ತು ಸ್ಪರ್ಧೆಗಿಳಿಯುವವನು ಸಹ ನಾನೇ, ಇದನ್ನು ಆನ್ ರೆಕಾರ್ಡ್ ಹೇಳುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚನ್ನಪಟ್ಟಣದ ಅಭ್ಯರ್ಥಿ ನಾನೇ. ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ನನಗೆ ಮತ ಹಾಕಿದಂತೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಪುನರುಚ್ಚರಿಸಿದರು.

DK Shivakumar Says He Would Be Party Candidate For Channapatna In By Election

ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ಬಿಜೆಪಿ, ಜೆಡಿಎಸ್ ಪಕ್ಷಗಳು ಚರ್ಚೆ ನಡೆಸಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಎರಡು ವಿರೋಧ ಪಕ್ಷಗಳು ಒಂದಾಗಿವೆ. ಒಂದು, ಎರಡು, ಮೂರಾದರೂ ಆಗಲಿ ನಮಗೆ ಅದು ಸಂಬಂಧವಿಲ್ಲ. ನಾವು ಜನಸೇವೆ ಮಾಡುತ್ತೇವೆ, ಅದರ ಮೇಲೆ ಮಿಕ್ಕಿದ್ದನ್ನು ಜನರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಹೇಳಿದರು.

ಸಿ.ಪಿ.ಯೋಗೇಶ್ವರ್ ಅವರು ಬಂದರೆ ಪಕ್ಷಕ್ಕೆ ಆಹ್ವಾನ ಮಾಡುವಿರಾ ಎಂದು ಕೇಳಿದಾಗ "ನೀವುಗಳು (ಮಾಧ್ಯಮ) ಏಕೆ ಇದರ ಬಗ್ಗೆ ಮಾತನಾಡುತ್ತೀರಾ? ನಮ್ಮ ಬಳಿಗೆ ಯಾರೂ ಬಂದಿಲ್ಲ, ಚರ್ಚೆಯನ್ನೂ ಮಾಡಿಲ್ಲ. ಅವರು ಮೈತ್ರಿ ಮಾಡಿಕೊಂಡಿರುವಾಗ ಏಕೆ ಅವರ ಬಗ್ಗೆ ಮಾತನಾಡಬೇಕು. ಮೊದಲು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು. ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎನ್ನುವ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು ಮಾತನಾಡಿ, ನನಗೆ ನಿಮ್ಮಗಳ (ಮಾಧ್ಯಮ) ಮಾತಿನ ಮೇಲೆ ನಂಬಿಕೆ ಇಲ್ಲ" ಎಂದು ಹೇಳಿದರು.

ಉಪ ಚುನಾವಣೆ ತಯಾರಿಗಾಗಿ ಚನ್ನಪಟ್ಟಣದಲ್ಲಿ ಉದ್ಯೋಗಮೇಳ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದಾಗ "ಸೇವೆ ಮಾಡಲು ನಮಗೆ ಅಧಿಕಾರ, ಅವಕಾಶ ನೀಡಿದ್ದಾರೆ. ನಾವು ನಮ್ಮ ಅಧಿಕಾರ ಬಳಸಿಕೊಂಡು ಜನರಿಗಾಗಿ ಯಾವ ರೀತಿ ಒಳ್ಳೆಯದು ಮಾಡಬೇಕು ಎಂಬುದು ನಮ್ಮ ಸರ್ಕಾರದ ಚಿಂತನೆ. ಗುರುವಾರ ಎತ್ತಿನಹೊಳೆ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ವೀಕ್ಷಣೆಗೆ ಹೋಗಿದ್ದೆ. ಕೆಲವರು ಮೂಗು, ಬಾಯಿ, ಕಿವಿ ಕತ್ತರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ಆದರೆ ನಾನು ಏತ ಕಾಮಗಾರಿ ಪರೀಕ್ಷಾರ್ಥ ಕಾರ್ಯಾಚರಣೆ ಚಾಲನೆ ನೀಡಿದ್ದು, ಸಧ್ಯದಲ್ಲೇ ಶುಭ ಮುಹೂರ್ತ ನೋಡಿ ಉದ್ಘಾಟನಾ ದಿನಾಂಕ ನಿಗದಿ ಮಾಡಲಿದ್ದೇವೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ಇದು ನಮ್ಮ ಕೆಲಸದ ವೈಖರಿ" ಎಂದರು.

ಅದೇ ರೀತಿ ಉದ್ಯೋಗ ಮೇಳ ಮೂಲಕ ನಮ್ಮ ಭಾಗದ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುತ್ತಿದ್ದೇವೆ. ನಾನು ಜಿಲ್ಲೆಗೆ ಹೋದಾಗಲೆಲ್ಲಾ ಕೆಲಸ ಕೊಡಿಸಿ ಎಂದು ಯುವಕರು ಅರ್ಜಿ ನೀಡುತ್ತಿದ್ದರು. ನಮಗೆ ಅರ್ಜಿ ಕೊಟ್ಟವರನ್ನು ಕರೆಸುತ್ತಿದ್ದೇವೆ. ಎಷ್ಟು ಜನರಿಗೆ ಉದ್ಯೋಗ ಸಿಗುತ್ತೋ ಸಿಗಲಿ. ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರಾಜಭವನ ಚಲೋ ಬಗ್ಗೆ ಉತ್ತರಿಸಿ, ಶನಿವಾರ ರಾಜ್ಯಪಾಲರು ಭೇಟಿ ಮಾಡಲು ನಮಗೆ ಅವಕಾಶ ನೀಡಿದ್ದಾರೆ. ಇತ್ತೀಚೆಗೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರು ಭೇಟಿಗೆ ಕಾಲಾವಕಾಶ ನೀಡಿದ್ದು, ನಾವು ನಮ್ಮ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

ಯಡಿಯೂರಪ್ಪ ಅವರ ಮೇಲಿನ ಪೋಸ್ಕೊ ಕೇಸ್ ತೀರ್ಪಿನ ಕುರಿತು ಮಾತನಾಡಿ, ಅದು ನ್ಯಾಯಾಲಯದ ವಿಚಾರ. ನನಗೆ ಗೊತ್ತಿಲ್ಲ. ನ್ಯಾಯಾಲಯ ತೀರ್ಪು ನೀಡುವುದು ಗೊತ್ತು, ಅದು ಬಂದ ಮೇಲೆ ಮಾತನಾಡುತ್ತೇವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+