Bengaluru 2nd Airport: 2ನೇ ವಿಮಾನ ನಿಲ್ದಾಣದ ಕ್ರೆಡಿಟ್‌ಗೆ ದಳಪತಿಗಳು ಪ್ಲಾನ್: ಡಿಕೆಶಿ ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 07: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಕ್ರೆಡಿಟ್ ಅನ್ನು ದೇವೇಗೌಡರು, ಕುಮಾರಸ್ವಾಮಿ ಅವರು ತಗೆದುಕೊಳ್ಳುತ್ತಿರುವ ಕುರಿತು ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ವಿಮಾನ ನಿಲ್ದಾಣವು ಬಿಡದಿ, ನೆಲಮಂಗಲ. ತುಮಕೂರು, ಸೋಲೂರು ಹೀಗೆ ಯಾವ ಸ್ಥಳದಲ್ಲಿ ಬರಬೇಕು ಎಂಬುದನ್ನು ತೀರ್ಮಾನ ಮಾಡುವುದು ನಮ್ಮ ವ್ಯಾಪ್ತಿಯಲ್ಲಿಲ್ಲ. ಇದು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರು ತೀರ್ಮಾನ ಮಾಡುತ್ತಾರೆ. ಎರಡನೇ ವಿಮಾನ ನಿಲ್ದಾಣವನ್ನು ಇಂತಿಷ್ಟು ವರ್ಷಗಳ ಕಾಲ ನಿರ್ಮಾಣ ಮಾಡಬಾರದು ಎನ್ನುವ ಒಪ್ಪಂದವಿದೆ. ಇದನ್ನು ಆ ಎರಡು ಸಂಸ್ಥೆಗಳು ತೀರ್ಮಾನ ಮಾಡುತ್ತವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಗ್ಯಾರಂಟಿ ಹೊರೆ ಮಧ್ಯೆ ಬಜೆಟ್ ಮಂಡನೆಗೆ ಸಿದ್ಧತೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರಂಟಿ ಯೋಜನೆಗಳು ಆರ್ಥಿಕ ಹೊರೆ ಎಂದು ಹೇಳಿದ್ದು ಯಾರು? ಇದು ಜನರ ಬದುಕಿಗೆ ಸರ್ಕಾರ ಕೊಟ್ಟಿರುವ ಶಕ್ತಿ. ಜನರ ಆರ್ಥಿಕ ಹೊರೆ ತಪ್ಪಿಸಲು ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಎಲ್ಲಾ ವರ್ಗದವರಿಗೂ ಆರ್ಥಿಕ ಶಕ್ತಿ ತುಂಬಲು ಪ್ರತಿ ಕ್ಷೇತ್ರಕ್ಕೆ ₹ 250 ಕೋಟಿಯಷ್ಟು ಹಣ ನೀಡಲಾಗುತ್ತಿದೆ. ಈ ಯೋಜನೆಗಳಿಗಾಗಿ ₹ 56 ಸಾವಿರ ಕೋಟಿ ಹಣ ನೀಡಲಾಗಿದ್ದು, ಈ ಯೋಜನೆ ಜನರಿಗಾಗಿ ಮಾಡಲಾಗಿದೆ.
ಜೀವ ಇದ್ದರೆ ಜೀವನ. ನಮ್ಮ ಸರ್ಕಾರ ಹಸಿದವರು, ಬಡವರ ಬಗ್ಗೆ ಆಲೋಚಿಸಿ ಈ ಕಾರ್ಯಕ್ರಮ ರೂಪಿಸಿದೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 2-3 ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು. ಕೇಂದ್ರ ಸರ್ಕಾರದ ಬಜೆಟ್ ರಾಜ್ಯದ ಪಾಲಿಗೆ ಖಾಲಿ ಬುಟ್ಟಿ. ದೇವೇಗೌಡರು, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಮಂತ್ರಿಗಳು, ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚಕಾರ ಎತ್ತಲಿಲ್ಲ. ನಮ್ಮ ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಆದರೂ ಮಾತು ಮಾತ್ರ ದೊಡ್ಡದಾಗಿ ಆಡುತ್ತಾರೆ. ನಮ್ಮನ್ನು ಟೀಕಿಸಿದರೆ ಅವರಿಗೆ ಆನಂದ. ನಮ್ಮನ್ನು ಟೀಕಿಸಿಯಾದರೂ ಅವರು ಸಂತೋಷ ಪಡುತ್ತಾರಲ್ಲಾ ಅದೇ ನಮಗೆ ತೃಪ್ತಿ ಎಂದು ತಿಳಿಸಿದರು.
ಬೆಂಗಳೂರಿಗೆ ನೀರು ಕೊಡಿಸುವುದೇ ನನ್ನ ಕೊನೆ ಆಸೆ ಎಂಬ ದೇವೇಗೌಡರ ಹೇಳಿಕೆ ಕುರಿತು ಮಾತನಾಡಿ, ನಾನು ಸಚಿವನಾದ ಬಳಿಕ ಬೆಂಗಳೂರಿಗೆ ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ಮಂಜೂರು ಮಾಡಿದ್ದೇನೆ. ಆಮೂಲಕ ಬೆಂಗಳೂರಿನ ಇತಿಹಾಸದಲ್ಲಿ ಈ ಡಿ.ಕೆ. ಶಿವಕುಮಾರ್ ಹೊಸ ಅಧ್ಯಾಯ ಬರೆದಿದ್ದಾನೆ. ಬಿಜೆಪಿ ಹಾಗೂ ದಳದ ಸರ್ಕಾರಗಳು ಈ ತೀರ್ಮಾನ ಮಾಡಿರಲಿಲ್ಲ. ನಿಂತುಹೋಗಿದ್ದ 5ನೇ ಹಂತದ ಯೋಜನೆಗೆ ಮತ್ತೆ ಚಾಲನೆ ನೀಡಿ ತೊರೆಕಾಡನಹಳ್ಳಿಯಿಂದ ನೀರು ತರಲಾಗಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದೆ.
ಎತ್ತಿನಹೊಳೆಯಿಂದ ನೀರನ್ನು ಆಚೆಗೆ ತಂದಿದ್ದೇನೆ. ಈ ವರ್ಷದ ಕೊನೆ ವೇಳೆಗೆ ತುಮಕೂರಿನವರೆಗೂ ಎತ್ತಿನಹೊಳೆ ನೀರನ್ನು ಹರಿಸಲಾಗುವುದು. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಟೀಕೆ ಟಿಪ್ಪಣಿ ಮಾಡಿದರು. ಮೋದಿ ಅವರ ಕೈ ಹಿಡಿದು ಈ ಯೋಜನೆಗೆ ಸಹಿ ಹಾಕಿಸುವುದಾಗಿ ಹೇಳಿದ್ದರು, ಆದರೂ ಈವರೆಗೂ ಯಾಕೆ ಸಹಿ ಹಾಕಿಸಿಲ್ಲ? ಕೇವಲ ಪ್ರಚಾರಕ್ಕೆ ಮಾತನಾಡುವುದಲ್ಲ, ರಾಜಕೀಯ ಬದ್ಧತೆ ಇರಬೇಕು. ಅವರ ಅನುಭವ ಹಾಗೂ ಹಿರಿತನಕ್ಕೆ ನಾವು ಗೌರವಿಸುತ್ತೇವೆ. ಆ ಗೌರವವನ್ನು ಅವರು ಉಳಿಸಿಕೊಳ್ಳಬೇಕು ಎಂದು ಹೇಳಿದರು.












Click it and Unblock the Notifications