Cabinet Reshuffle: ಸಚಿವ ಸಂಪುಟ ಪುನಾರಚನೆ: ಅಪ್‌ಡೇಟ್ ಕೊಟ್ಟ ಡಿ.ಕೆ. ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 09: ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಇದು ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಈ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ನನ್ನ ಜೊತೆ ಈ ವಿಚಾರ ಚರ್ಚೆ ಮಾಡಿದರೆ ನಾನು ನನ್ನ ಸಲಹೆ ನೀಡುತ್ತೇನೆ. ಈ ವಿಚಾರವಾಗಿ ಅನಗತ್ಯ ಚರ್ಚೆ ಮಾಡಿ ಗೊಂದಲ ಸೃಷ್ಟಿಸಬೇಡಿ ಎಂದು ನಿಮ್ಮಲ್ಲಿ (ಮಾಧ್ಯಮ) ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಔತಣಕೂಟ ಆಯೋಜಿಸಿರುವ ಕುರಿತು ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಾತನಾಡಿ, ಇದರಲ್ಲಿ ತಪ್ಪೇನಿದೆ? ಒಟ್ಟಿಗೆ ಸೇರಿ ಊಟ ಮಾಡಿ, ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುವುದು ಸಹಜ ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಂಪನ್ಮೂಲ ಕ್ರೂಢೀಕರಣ ಹೇಗೆ ಎಂಬ ಬಗ್ಗೆ ಮಾತನಾಡಿ, ಕೆಲವು ಪ್ರದೇಶಗಳಲ್ಲಿ ನಾವು ಬೂಟ್ ಮಾದರಿ (ಬಿಲ್ಡ್ ಆಪರೇಟ್ ಟ್ರಾನ್ಸ್ಪೋರ್ಟ್) ಅಳವಡಿಸಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ನಾವು 1.25 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಮುಂದಾಗಿದ್ದೇವೆ. ಟನಲ್ ರಸ್ತೆಗೆ 35-40 ಸಾವಿರ ಕೋಟಿ, ಮೇಲ್ಸೇತುವೆಗೆ ಸುಮಾರು 14 ಸಾವಿರ ಕೋಟಿ, ಡಬಲ್ ಡೆಕ್ಕರ್ ರಸ್ತೆಗೆ 10 ಸಾವಿರ ಕೋಟಿ, 16,100 ಕೋಟಿ, ಬಫರ್ ಜೋನ್ ರಸ್ತೆಗೆ 4 ಸಾವಿರ ಕೋಟಿ ಅನುದಾನದ ಅಗತ್ಯವಿದೆ ಎಂದು ವಿವರಿಸಿದರು.
ಬಿಗ್ ಬಾಸ್ ವಿಚಾರವಾಗಿ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಬುಧವಾರ ರಾತ್ರಿ ಡಿಸಿಗೆ ಕರೆ ಮಾಡಿ ಜಾಲಿವುಡ್ ಸ್ಟುಡಿಯೋದವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಒಂದು ಅವಕಾಶ ಕಲ್ಪಿಸಿ ಎಂದು ಸೂಚಿಸಿದ್ದೇನೆ. ನಮ್ಮ ಉದ್ಯಮ ಬೆಳೆಯಬೇಕು. ಇದು ಹೆಚ್ಚಿನ ಮಾಲಿನ್ಯ ಉಂಟು ಮಾಡಲು ದೊಡ್ಡ ಕಾರ್ಖಾನೆಯಲ್ಲ. ಸಣ್ಣಪುಟ್ಟ ನಿಯಮ ಉಲ್ಲಂಘನೆಯಾಗಿದ್ದರೆ ಸರಿಪಡಿಸಿಕೊಳ್ಳಿ, ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾವಳಿಯನ್ನು ಪಾಲನೆ ಮಾಡಿ ಎಂದು ಸ್ಟುಡಿಯೋದವರಿಗೂ ಹೇಳಿ ಕಳುಹಿಸಿದ್ದೇನೆ" ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 104 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ ರಸ್ತೆ ಯೋಜನೆ ರೂಪಿಸಲಾಗಿದೆ. 40 ಕಿ.ಮೀ ಉದ್ದದ ಟನಲ್ ರಸ್ತೆ ನಿರ್ಮಿಸಲು ಮುಂದಾಗಿದ್ದೇವೆ. ಅನೇಕ ಟೀಕೆಗಳು ವ್ಯಕ್ತವಾಗುತ್ತಿವೆ. ಇದು ಸೂಕ್ತ ಪರಿಹಾರವಲ್ಲದಿದ್ದರೆ ಮುಂಬೈನಲ್ಲಿ ಈ ಯೋಜನೆ ಯಾಕೆ ಮಾಡುತ್ತಿದ್ದಾರೆ? ಜಪಾನ್, ಲಂಡನ್ ನಲ್ಲಿ ಯಾಕೆ ಮಾಡುತ್ತಿದ್ದಾರೆ. ನೀವು ಹೆಬ್ಬಾಳ, ಕೆ.ಆರ್ ಪುರಂ ಜಕ್ಷನ್ ಸೇರಿದಂತೆ ಎಲ್ಲಿ ನೋಡಿದರೂ ಟ್ರಾಫಿಕ್ ಹೆಚ್ಚಾಗಿದೆ. ನಮ್ಮ ಸರ್ಕಾರಕ್ಕೂ ಮುನ್ನ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನಾಲ್ಕು ವರ್ಷಗಳ ಅಧಿಕಾರ ಮಾಡಿತ್ತು.
ಈ ಸಮಯದಲ್ಲಿ ಅವರು ಬೆಂಗಳೂರಿನ ಸಮಸ್ಯೆ ಬಗೆಹರಿಸಲು ಒಂದು ಫ್ಲೈಓವರ್, ರಸ್ತೆ ಸೇರಿದಂತೆ ಒಂದೇ ಒಂದು ಕೆಲಸ ಮಾಡಿದ್ದರೆ ಹೇಳಿ, ನಾನು ಇಲ್ಲೇ ನನ್ನ ಹೆಸರು ಬದಲಾಯಿಸಿಕೊಂಡು ಹೋಗುತ್ತೇನೆ. ಟನಲ್ ಹೊರತಾಗಿ ಉಳಿದ ಎಲ್ಲಾ ಯೋಜನೆಗಳು ಮೂರ್ನಾಲ್ಕು ವರ್ಷಗಳಲ್ಲಿ ಮುಕ್ತಾಯವಾಗಲಿದ್ದು, ಟನಲ್ ರಸ್ತೆಗೆ ನಾಲ್ಕು ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ಬೇಕಾಗಿದೆ. ಈ ಯೋಜನೆಗೆ ಟನರ್ ಕೊರೆಯುವ ಯಂತ್ರ ಬರಲು ಒಂದೂವರೆ ವರ್ಷಬೇಕಾಗುತ್ತದೆ. ಟನಲ್ ರಸ್ತೆಯಿಂದ ಲಾಲ್ ಬಾಗ್ ಗೆ ಯಾವುದೇ ತೊಂದರೆ ಆಗುವುದಿಲ್ಲ. ಟೀಕೆ ಮಾಡುವವರು ಮಾಡುತ್ತಿರುತ್ತಾರೆ ಎಂದು ತಿಳಿಸಿದರು.












Click it and Unblock the Notifications