ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ಕಾರು ಪಲ್ಟಿ, ಹಲವರಿಗೆ ಗಂಭೀರ ಗಾಯ!
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಎಸ್ಕಾರ್ಟ್ ವಾಹನ ಅಪಘಾತಕ್ಕೀಡಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ.ಹೋಸೂರು ಗೇಟ್ ಬಳಿ ಡಿಕೆ ಶಿವಕುಮಾರ್ ಅವರ ಎಸ್ಕಾರ್ಟ್ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಘಟನೆಯಲ್ಲಿ ಎಸ್ಕಾರ್ಟ್ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಡಿ.ಕೆ.ಶಿವಕುಮಾರ್ ಈ ಘಟನೆ ನಡೆದಾಗ ತಮ್ಮ ಕಾರಿನಲ್ಲಿ ಹಿಂದೆ ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಅವರಿಗೆ ಯಾವುದೇ ಹಾನಿಯಾಗಿಲ್ಲ. ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಚಾಲಕ ಡಿವೈಡರ್‌ಗೆ ಹೊಡೆದಿದ್ದರಿಂದ ವಾಹನ ಪಲ್ಟಿಯಾಗಿದೆ. ಉಪಮುಖ್ಯಮಂತ್ರಿ 'ಸಾಧನ ಸಮಾವೇಶ'ದಲ್ಲಿ ಭಾಗವಹಿಸಿ ಮೈಸೂರಿನಿಂದ ಬೆಂಗಳೂರಿಗೆ ಮರಳುತ್ತಿದ್ದರು. ಆಗ ಈ ಘಟನೆ ನಡೆದಿದೆ.

ವಾಹನ ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರಣ ಎಸ್ಕಾರ್ಟ್ ಕಾರಿನಲ್ಲಿದ್ದ ದಿನೇಶ್, ಮಹೇಶ್, ಜಯಲಿಂಗು ಮತ್ತು ಕಾರ್ತಿಕ್ ಎಂಬುವವರು ಗಾಯಗೊಂಡು, ಅವರಿಗೆ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಡಿಕೆ ಶಿವಕುಮಾರ್ ಅವರ ವಾಹನ ಹಿಂದೆ ಇದ್ದ ಕಾರಣ ಅನಾಹುತದಿಂದ ಪಾರಾಗಿದ್ದಾರೆ. ಈ ಅಪಘಾತದ ಬಳಿಕ ಡಿಕೆ ಶಿವಕುಮಾರ್ ಅವರ ಬೆಂಗಾವಲು ತಾತ್ಕಾಲಿಕ ನಿಲ್ಲಿಸಿ, ಗಾಯಳಾಗಿದ್ದ ಸಿಬ್ಬಂದಿಗೆ ತ್ವರಿತ ಚಿಕಿತ್ಸೆ, ಬದಲಿ ವಾಹನ ವ್ಯವಸ್ಥೆ ಕಲ್ಪಿಸಿ ನಂತರ ಅವರು ಸುರಕ್ಷಿತವಾಗಿ ಬೆಂಗಳೂರು ಕಡೆಗೆ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಮಂಡ್ಯ ಎಸ್‌ಪಿ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಮತ್ತು ಪ್ರಕರಣ ದಾಖಲಾಗಿದೆ.
2028ರಲ್ಲಿ ಮತ್ತೆ ಗೆಲ್ಲಿಸಿ
ಇದಕ್ಕೂ ಮುನ್ನ ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ, ಸರ್ಕಾರದಲ್ಲಿ ಹಣವಿಲ್ಲ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಕಲ್ಯಾಣ ಕರ್ನಾಟಕಕ್ಕೆ ನಮ್ಮ ಸರ್ಕಾರ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಬೀದರ್ ನಲ್ಲಿ 2025 ಕೋಟಿ ಮೊತ್ತದ ಯೋಜನೆಗೆ ಚಾಲನೆ ನೀಡಿದ್ದೇವೆ. ನಾವು ಭಾವನೆ ಮೇಲೆ ರಾಜಕೀಯ ಮಾಡುವುದಿಲ್ಲ, ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ ಎಂದು ಹೇಳಿದ್ದರು.
ಇದು ನಿಮ್ಮ ಹಸ್ತ. ಈ ಹಸ್ತ ಟೀಕೆ ಮಾಡುವ ವಿರೋಧಿಗಳ ಬಾಯಿ ಮುಚ್ಚಿಸಿದೆ, ರೈತರನ್ನು ಉಳಿಸಿದೆ, ಮಹಿಳೆಯರಿಗೆ ಶಕ್ತಿ ತುಂಬಿದೆ, ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ಕೊಟ್ಟಿದೆ. ವಿಪಕ್ಷದವರು ನಮ್ಮನ್ನು ಟೀಕಿಸಬಹುದು. ನಿಂದಕರು ಇದ್ದಾಗ ಮಾತ್ರ ನಾವು ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯ. ಯಾರು ಎಷ್ಟೇ ಟೀಕೆ ಮಾಡಿದರೂ ನಮ್ಮ ಸರ್ಕಾರ ಮುಂದೆ ಸಾಗುತ್ತಿರುತ್ತದೆ. ಕಳೆದ ವರ್ಷ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ನಾವು ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಸೋಲಿಸಿದ್ದೇವೆ. ಈ ಮೂಲಕ ಮತದಾರರು ಸಂದೇಶ ರವಾನಿಸಿ, ನಮಗೆ ಆತ್ಮಬಲ ತುಂಬಿದ್ದಾರೆ. 2028ರ ಚುನಾವಣೆಯಲ್ಲಿ ನೀವು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಿಸಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದ್ದರು.












Click it and Unblock the Notifications