2028ರ ಚುನಾವಣೆ ವೇಳೆಗೆ ಡಿಕೆ ಶಿವಕುಮಾರ್ ಯಾವ ಹುದ್ದೆಯಲ್ಲಿ ಇರ್ತಾರೆ? ಇಲ್ಲಿದೆ ಟ್ವಿಸ್ಟ್
ಕಾಂಗ್ರೆಸ್‌ನಲ್ಲಿ ಇದೀಗ ಒಡಕು ಮೂಡಿರುವ ಲಕ್ಷಣಗಳು ಕಂಡುಬರುತ್ತಿವೆ. ಸಿಎಂ ಹುದ್ದೆಯ ನಿರೀಕ್ಷೆಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತೆ ತಮ್ಮ ಹೇಳಿಕೆಯ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್‌ನಲ್ಲಿ ತಮಗೆ ಮುಂದೆ ಯಾವ ಹುದ್ದೆ ಸಿಗಲಿದೆ ಎಂಬುದರ ಬಗ್ಗೆಯೂ ಸುಳಿವು ನೀಡಿದ್ದಾರೆ. 2028ರ ವಿಧಾನಸಭೆ ಚುನಾವಣೆ ಪ್ರಸ್ತಾಪದ ವೇಳೆ ಈ ಬಗ್ಗೆ ಉತ್ತರ ನೀಡಿದ್ದಾರೆ ಡಿ.ಕೆ.ಶಿವಕುಮಾರ್.
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ 2023ರ ವಿಧಾನಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ನಾನು ಯಾವ ಹುದ್ದೆಯಲ್ಲಿದ್ದರೂ 2028ರ ವಿಧಾನಸಭೆ ಚುನಾವಣೆ ನನ್ನ ನಾಯಕತ್ವದಲ್ಲೇ ನಡೆಯಲಿದೆ. ಹುದ್ದೆಗಳು ಪಕ್ಷವನ್ನು ಮುನ್ನಡೆಸುವಂತೆ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ ಎಂದು ಡಿಕೆಶಿ ಹೇಳಿದ್ದಾರೆ. ಮುಂದೆ ನಾನು ಏನೇ ಆಗಬಹುದು. ಆದರೆ ಅದು ಮುಖ್ಯವಲ್ಲ. ಕಾಂಗ್ರೆಸ್ ಪಕ್ಷ ನನಗೆ ಕೊಟ್ಟಿರುವ ಶಕ್ತಿಯಿಂದ ನಾವು ನಾಯಕರಾಗಿದ್ದು, ಕಾಂಗ್ರೆಸ್‌ನವನಾಗಿ ಪಕ್ಷಕ್ಕೆ ಶಕ್ತಿ ತುಂಬುವ ಮೂಲಕ ಮುನ್ನಡೆಸುವುದು ಮುಖ್ಯ ಎಂದಿದ್ದಾರೆ.

ಅಲ್ಲದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದ 86 ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಸಾಧ್ಯತೆ ಇರುವುದಾಗಿ ನಮ್ಮ ಆಂತರಿಕ ಸಮೀಕ್ಷೆಗಳು ಹೇಳುತ್ತಿವೆ. ಈ ಹಿನ್ನೆಲೆ ಕಳೆದ ಚುನಾವಣೆಯಲ್ಲಿ ಸೋತಿರುವ ಪಕ್ಷದ ಅಭ್ಯರ್ಥಿಗಳ ಜೊತೆ ವಿಶೇಷ ಚರ್ಚೆ ನಡೆಸಿದ್ದೇನೆ. ಮುಂದಿನ 2028ರ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಅವರಿಗೆ ಸೂಚಿಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿದ್ದ ಕ್ಷೇತ್ರಗಳಲ್ಲಿ ಯಾವ ರೀತಿ ಪಕ್ಷ ಸಂಘಟಿಸಬೇಕು ಎಂಬ ಬಗ್ಗೆಯೂ ಕಾರ್ಯತಂತ್ರ ರೂಪಿಸಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಚಿವ ಸಂಪುಟದ ಎಲ್ಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಬೇಕು ಎಂದು ಟಾಸ್ಕ್ ಕೂಡ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು, ನಾನೂ ಸೇರಿದಂತೆ ಎಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಪಕ್ಷದ ಸಭೆಗಳನ್ನ ನಡೆಸಬೇಕು. ಕಾರ್ಯಕರ್ತರೊಂದಿಗೆ ಸಭೆ ನಡೆಸುವ ಜೊತೆಗೆ ಬಿಡುವಿದ್ದರೆ ಬೇರೆ ಜಿಲ್ಲೆಗಳಲ್ಲೂ ಸಭೆ ನಡೆಸಬೇಕು ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಪಕ್ಷವನ್ನು ಇನ್ನಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದ್ದು, ಪರಾಜಿತ ಅಭ್ಯರ್ಥಿಗಳಿಗೆ ಮುಂದಿನ ಚುನಾವಣೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವ ಕುರಿತು ಸೂಚನೆ ನೀಡಿದ್ದೇನೆ ಎಂದಿದ್ದಾರೆ.
100 ಕಾಂಗ್ರೆಸ್ ಕಚೇರಿ ಆರಂಭ: ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ಆರಂಭಿಸಲಾಗುತ್ತಿದೆ. ಮಾರ್ಚ್ ಎರಡನೇ ವಾರದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನು ನೂತನ ಕಚೇರಿಯ ಶಂಕುಸ್ಥಾಪನೆಗೆ ಆಹ್ವಾನಿಸುತ್ತಿದ್ದೇವೆ. ಇದೇ ವೇಳೆ ಅವರು 100 ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆಯನ್ನು ವರ್ಚುವಲ್ ಆಗಿ ನೆರವೇರಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ನಾನು ಹಾಗೂ ಸಿದ್ದರಾಮಯ್ಯ ಅವರೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದೇವೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಕರ್ತರ ಸಭೆ ನಡೆಯಲಿದೆ. ಪಕ್ಷದ ಕಚೇರಿ ನಿರ್ಮಾಣಕ್ಕೆ ಜಾಗಗಳನ್ನು ಆದಷ್ಟು ಬೇಗ ಅಂತಿಮಗೊಳಿಸುತ್ತೇವೆ. ಕಾಂಗ್ರೆಸ್ ಕಚೇರಿಗಾಗಿ ರಾಮನಗರದಲ್ಲಿ ನಾನೇ ಖುದ್ದಾಗಿ ಒಂದು ಜಾಗ ಖರೀದಿ ಮಾಡಿ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದೂ ಹೇಳಿದ್ದಾರೆ.












Click it and Unblock the Notifications