ಶಾಸಕರ ಬಿಡುಗಡೆಗಾಗಿ ಹೈಕೋರ್ಟ್‌ಗೆ ದಿಗ್ವಿಜಯ್ ಸಿಂಗ್!
ಬೆಂಗಳೂರು, ಮಾರ್ಚ್ 18 : ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿದ್ದಾರೆ. ಶಾಸಕರನ್ನು ಬಿಡುಗಡೆಗೊಳಿಸಲು ಕೋರಿ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ.
ಯಲಹಂಕ ಬಳಿಯ ರಮಡಾ ಹೋಟೆಲ್‌ನಲ್ಲಿ ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಈ ಹೋಟೆಲ್‌ಗೆ ಕರ್ನಾಟಕದ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಶಾಸಕರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡುತ್ತಿಲ್ಲ.
ಬುಧವಾರ ಶಾಸಕರನ್ನು ಭೇಟಿ ಮಾಡಲು ಮಧ್ಯಪ್ರದೇಶದಿಂದ ದಿಗ್ವಿಜಯ್ ಸಿಂಗ್ ಆಗಮಿಸಿದ್ದರು. ಆದರೆ, ಪೊಲೀಸರು ಅವಕಾಶ ನೀಡಲಿಲ್ಲ. ಸಿಂಗ್ ಸ್ಥಳದಲ್ಲಿ ಧರಣಿ ಕುಳಿತರು. ಪೊಲೀಸರು ಬಲವಂತದಿಂದ ಅವರನ್ನು ವಶಕ್ಕೆ ಪಡೆದರು.

ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿದ್ದ ದಿಗ್ವಿಜಯ್ ಸಿಂಗ್‌ರನ್ನು ಕೆಪಿಸಿಸಿಯ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. ಬಳಿಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಭೇಟಿಯಾಗಿ ಶಾಸಕರ ಭೇಟಿಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಶಾಸಕರನ್ನು ಭೇಟಿ ಮಾಡಲೇಬೇಕು ಎಂದು ದಿಗ್ವಿಜಯ್ ಸಿಂಗ್ ಪಟ್ಟು ಹಿಡಿದಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಶಾಸಕರ ಬಿಡುಗಡೆಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲು ಮುಂದಾಗಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಘಟಕ ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ನಮ್ಮ ಶಾಸಕರನ್ನು ಬಿಜೆಪಿ ಅಪಹರಣ ಮಾಡಿದೆ ಎಂದು ದೂರಿದೆ. ಮುಖ್ಯಮಂತ್ರಿ ಕಮಲನಾಥ್ ಬಹುಮತ ಸಾಬೀತು ಮಾಡಲು ಸೂಚಿಸಬೇಕು ಎಂದು ಬಿಜೆಪಿ ಸುಪ್ರೀಂ ಮೊರೆ ಹೋಗಿದೆ.
16 ಶಾಸಕರು ನಮ್ಮ ರಾಜೀನಾಮೆ ಅಂಗೀಕರಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಗುರುವಾರ ಬೆಳಗ್ಗೆ 10.30ಕ್ಕೆ ಕೈಗೆತ್ತಿಕೊಳ್ಳಲಿದೆ.












Click it and Unblock the Notifications