Muda Scam: ಸಿ.ಎಂ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣಗೆ ಈ ವಿಷಯದಲ್ಲಿ ಸಂಕಷ್ಟ
ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ)ದ ಬದಲಿ ನಿವೇಶನ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಲೋಕಾಯುಕ್ತದಲ್ಲಿ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರಿಗೆ ಸಂಕಷ್ಟ ಎದುರಾಗಿದೆ. ಸ್ನೇಹಮಹಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲೋಕಾಯುಕ್ತ ದೂರು ಸ್ವೀಕರಿಸುತ್ತಿಲ್ಲ ಎಂದೂ ಸಹ ಆರೋಪಿಸಿದ್ದರು. ಇದೀಗ ಅವರಿಗೆ ಬೇರೊಂದು ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾದಿಂದ ಬದಲಿ ನಿವೇಶನ ಪಡೆದ ವಿಷಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಡಾ ಹಗರಣವು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಹಂತಕ್ಕೆ ಈ ಪ್ರಕರಣ ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷಗಳು ಸಹ ಆಗ್ರಹ ವ್ಯಕ್ತಪಡಿಸಿವೆ. ಇದೀಗ ಈ ಪ್ರಕರಣದಲ್ಲಿ ಬೆನ್ನು ಬಿಡದೆ ಸಿ.ಎಂ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಅವರು, ವಂಚನೆ ಪ್ರಕರಣವೊಂದರಲ್ಲಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ.

ಚಾಮರಾಜನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದಾರೆ. ಸಾಲ ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೃಷ್ಣ ಅವರ ಮೇಲೆ ಇದೆ. ಮೂರು ವರ್ಷದ ಅವಧಿಯಲ್ಲಿ ಅಂದರೆ, 2018,2019 ಮತ್ತು 2020ರಲ್ಲಿ ಪ್ರತಿ ವರ್ಷವೂ 1 ಲಕ್ಷ ರೂಪಾಯಿಯಂತೆ ಸಾಲವನ್ನು ಪಡೆದಿದ್ದಾರೆ. ಆದರೆ, ಆ ಹಣವನ್ನು ಹಿಂದಿರುಗಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಿಂದ ವಿಚಾರಣೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ: ಸ್ನೇಹಮಯಿ ಕೃಷ್ಣ ಅವರು ಕರುಣಾಕರ ಎನ್ನುವವರಿಂದ ತಲಾ 1 ಲಕ್ಷ ರೂಪಾಯಿಯಂತೆ ಮೂರು ವರ್ಷ ಸಾಲ ಪಡೆದುಕೊಂಡಿದ್ದು, ಅದನ್ನು ಕಾಲಮಿತಿಯಲ್ಲಿ ತೀರಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಮೊದಲು ಸ್ವಲ್ಪ ಹಣವನ್ನು ಹಿಂದಿರುಗಿಸಿದ್ದಾರೆ. ಆದರೆ, ಅದಾದ ಮೇಲೆ ಬಾಕಿ ಸಾಲವನ್ನು ಹಿಂದಿರುಗಿಸದೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೃಷ್ಣ ಮೇಲಿದ್ದು, ಈ ಸಂಬಂಧ ದೂರು ದಾಖಲಾಗಿ, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಈ ಆರೋಪವನ್ನು ಕೃಷ್ಣ ಅವರು ನಿರಾಕರಿಸಿದ್ದಾರೆ. 50 ಸಾವಿರ ರೂಪಾಯಿ ಮಾತ್ರ ಸಾಲ ಪಡೆದುಕೊಂಡಿದ್ದೇನೆ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. 3 ಲಕ್ಷ ಸಾಲ ಪಡೆದಿರುವುದಾಗಿ ಪ್ರಾವಿಸರಿ ನೋಟ್ ಬರೆಸಿಕೊಳ್ಳಲಾಗಿದೆ. ಸತ್ಯಾಂಶ ಇಷ್ಟರಲ್ಲೇ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಸಾಲು ಸಾಲು ಪ್ರಕರಣ: ಸ್ನೇಹಮಯಿ ಕೃಷ್ಣ ಅವರ ಮೇಲೆ ಸಾಲು ಸಾಲು ಪ್ರಕರಣಗಳು ದಾಖಲಾಗಿವೆ. ಕೆಲವು ವಿಚಾರಣೆ ಮುಗಿದಿದ್ದರೆ ಇನ್ನೂ ಕೆಲವೊಂದು ವಿಚಾರಣೆಯ ಹಂತದಲ್ಲಿ ಇದೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದು, ನನ್ನ ಮೇಲೆ 22 ಪ್ರಕರಣ ದಾಖಲಾಗಿತ್ತು. ಅವುಗಳಲ್ಲಿ 8 ಪ್ರಕರಣಗಳಲ್ಲಿ ನಿರಪರಾಧಿ ಎಂದು ಸಾಬೀತಾಗಿದ್ದು, ಇನ್ನುಳಿದ 9 ಪ್ರಕರಣಗಳು ಬೋಗಸ್ ಆಗಿವೆ. ಬಾಕಿ 3 ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಇರುವುದಾಗಿ ಹೇಳಿದ್ದಾರೆ.












Click it and Unblock the Notifications