ಎಸ್ ಟಿ ಸೋಮಶೇಖರ್ ಬಳಿಕ ಡಿ ಕೆ ಶಿವಕುಮಾರ್ ಭೇಟಿಯಾದ ಬಿಜೆಪಿ ಮತ್ತೊಬ್ಬ ಶಾಸಕ
ಬೆಂಗಳೂರು, ಫೆಬ್ರವರಿ 19: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್ ಟಿ ಸೋಮಶೇಕರ್ ಕಾಂಗ್ರೆಸ್ ನಾಯಕರ ಜೊತೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಒಂದೇ ವಿಮಾನದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜೊತೆಗೆ ಮಾಜಿ ಸಚಿವ ಎಸ್ ಸೋಮಶೇಖರ್ ಅವರು ಪ್ರಯಾಣಿಸಿರುವ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಹೌದು, ಕರ್ಣಾಟಕ ಬ್ಯಾಂಕ್ನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಮಂಗಳೂರಿಗೆ ಆಗಮಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ವಿಶೇಷ ವಿಮಾನದಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಪ್ರಯಾಣಿಸಿದ್ದಾರೆ.

ಕರ್ಣಾಟಕ ಬ್ಯಾಂಕ್ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಆದರೆ, ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರ ಹೆಸರು ಆಹ್ವಾನ ಪಟ್ಟಿಯಲ್ಲಿ ಇರಲಿಲ್ಲ. ಆದರೂ ಡಿ.ಕೆ. ಶಿವಕುಮಾರ್ ಅವರು ಆಗಮಿಸಿದ ವಿಶೇಷ ವಿಮಾನದಲ್ಲಿ ಒಟ್ಟಿಗೆ ಎಸ್.ಟಿ. ಸೋಮಶೇಖರ್ ಪ್ರಯಾಣ ಬೆಳಿಸಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದಂತಾಗಿದೆ. ಇನ್ನೂ ಎಸ್ ಟಿ ಸೋಮಶೇಖರ್ ಬಳಿಕ ಮತ್ತೊಬ್ಬ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ಅವರು ಇಂದು(ಸೋಮವಾರ) ಡಿ ಕೆ ಶಿವಕುಮಾರ್ ಅವರನ್ನ ಭೇಟಿಯಾಗಿದ್ದು,ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ.
ಸೋಮಶೇಖರ್ ಅವರ ಜತೆ ವಿಮಾನ ಪ್ರಯಾಣ ಹಾಗೂ ಗೋಪಾಲಯ್ಯ ಅವರ ಭೇಟಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸೋಮಶೇಖರ್ ಹಾಗೂ ಗೋಪಾಲಯ್ಯ ಅವರ ಜತೆ ವೈಯಕ್ತಿಕ ಸ್ನೇಹ, ಸಂಬಂಧಗಳಿವೆ ಎಂದು ತಿಳಿಸಿದರು.
ಸೋಮಶೇಖರ್ ಅವರು ಪದೇ ಪದೆ ನಿಮ್ಮ ಜತೆ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಕೇಳಿದಾಗ, ಗುರುತಿಸಿಕೊಳ್ಳುವುದಲ್ಲ. ಅವರು ಕೇವಲ ಮೂರು ವರ್ಷ ಮಾತ್ರ ಬೇರೆ ಕಡೆ ಹೋಗಿದ್ದಾರೆ. ಆದರೆ 35 ವರ್ಷಗಳಿಂದ ನಾವು ರಾಜಕೀಯವಾಗಿ ಸಂಸಾರ ಮಾಡಿದ್ದೇವೆ" ಎಂದು ತಿಳಿಸಿದರು.
ಕಮಲನಾಥ್ ಸೇರಿದಂತೆ ಯಾರೂ ಬಿಜೆಪಿ ಸೇರಲ್ಲ
ಬಿಜೆಪಿ ಬರೀ ಸುಳ್ಳನ್ನು ಪ್ರಚಾರ ಮಾಡಿಕೊಂಡೆ ಇರುತ್ತದೆ. ಕಮಲನಾಥ್ ಅವರು ಬಹಳ ಹಿರಿಯ ನಾಯಕರು. ಅವರು ಈಗಷ್ಟೇ ಚುನಾವಣೆ ಮುಗಿಸಿದ್ದಾರೆ. ಅವರು ಎಲ್ಲೂ ಬಿಜೆಪಿ ಸೇರುವುದಾಗಿ ಹೇಳಿಲ್ಲ. ಆದರೂ ಅವರು ಬಿಜೆಪಿ ಸೇರುತ್ತಾರೆ ಎಂದು ಸುಳ್ಳು ಹರಡುತ್ತಾರೆ. ಬೇರೆಯವರ ಹೆಸರು ಸೇರಿಸುತ್ತಾರೆ. ಕಮಲನಾಥ್ ಅವರು 50 ವರ್ಷಗಳ ರಾಜಕಾರಣದಲ್ಲಿ ಗಾಂಧಿ ಕುಟುಂಬದ ಜತೆ ಒಡನಾಟ ಇಟ್ಟುಕೊಂಡು ಪಕ್ಷ ಕಟ್ಟಿದ್ದಾರೆ. ಇಂತಹವರು ಬಿಜೆಪಿ ಸೇರುತ್ತಾರೆ ಎಂದು ಸುಳ್ಳು ಹೇಳಿ ಅವರ ಜಾತಿ ಕೆಡಿಸಿ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.
ಕಳೆದ 35 ವರ್ಷಗಳಿಂದ ನನಗೆ ಕಮಲನಾಥ್ ಅವರು ಪರಿಚಯವಿದ್ದಾರೆ. ಅವರು ಸಿದ್ಧಾಂತ, ಮೌಲ್ಯಗಳ ವ್ಯಕ್ತಿ. ಅವರು ಸಿದ್ಧಾಂತ ಬಿಟ್ಟು ಈ ವಯಸ್ಸಿನಲ್ಲಿ ಕಾಂಗ್ರೆಸ್ ಯಾಕೆ ತೊರೆಯುತ್ತಾರೆ? ಇನ್ನು ಮನೀಶ್ ತಿವಾರಿ ಅವರೂ ಕೂಡ ಕಾಂಗ್ರೆಸ್ ಪಕ್ಷದ ಪ್ರಮುಖ ಸಂಘಟಕರು. ಇವರೆಲ್ಲರೂ ಕಾಂಗ್ರೆಸ್ ಪಕ್ಷದ ನಾಯಕರು. ಕಮಲನಾಥ್ ಅವರೂ ಸೇರಿದಂತೆ ಯಾರೊಬ್ಬರು ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷ ಯಾವುದೇ ಒಬ್ಬ ನಾಯಕ ಮೇಲೆ ಅವಲಂಬಿತವಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಕಾರ್ಯಕರ್ತರ ಬುನಾದಿ ಇದೆ. ಗಾಂಧಿ ಕುಟುಂಬ ಇರುವವರೆಗೂ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲಿದೆ. ಕಾಂಗ್ರೆಸ್ ಪಕ್ಷ ಇರುವವರೆಗೂ ದೇಶ ಒಗ್ಗಟ್ಟಾಗಿರಲಿದೆ.
ಬಿಜೆಪಿ ಬಲಿಷ್ಠವಾಗಿದ್ದರೆ ಕಾಂಗ್ರೆಸ್ ನಾಯಕರನ್ನು ಯಾಕೆ ಸೆಳೆಯುತ್ತಿದ್ದಾರೆ?
ಬಿಜೆಪಿ ಬಲಿಷ್ಠವಾಗಿದ್ದರೆ ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿರುವುದೇಕೆ? ಬಿಜೆಪಿ ದುರ್ಬಲವಾಗಿರುವುದಕ್ಕೆ ಕಾಂಗ್ರೆಸ್ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಮಂತ್ರಿಗಳು ಈ ಚುನಾವಣೆಯಲ್ಲಿ 370 ಕ್ಷೇತ್ರ ಗೆಲ್ಲುವುದಾಗಿ ಹೇಳಿದ್ದಾರೆ. ಬಿಜೆಪಿ ಅಷ್ಟು ಕ್ಷೇತ್ರ ಗೆಲ್ಲುವುದು ನಿಜವೇ ಆದರೆ ಕಾಂಗ್ರೆಸ್ ನಾಯಕರನ್ನು ಯಾಕೆ ಸೆಳೆಯುತ್ತಿದ್ದಾರೆ? ಯಾರು ಗೆಲ್ಲಬೇಕು ಎಂದು ಜನ ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.












Click it and Unblock the Notifications