8 ಅಧಿಕಾರಿಗಳಿಗೆ ಮುಂಬಡ್ತಿ, 21 ಡಿವೈಎಸ್‌ಪಿಗಳಿಗೆ ಹಿಂಬಡ್ತಿ ಆದೇಶ
ಬೆಂಗಳೂರು, ಜು.26: ಪೊಲೀಸ್ ಇಲಾಖೆ ಪ್ರಕಟಿಸಿದ್ದ ಜ್ಯೇಷ್ಠತಾ ಪಟ್ಟಿಯಲ್ಲಿ ದೋಷಗಳಿವೆ ಎಂಬ ಕಾರಣಕ್ಕೆ 2018 ಏ.17ರಿಂದ ಅನ್ವಯವಾಗುವಂತೆ ಹೈದರಾಬಾದ್-ಕರ್ನಾಟಕೇತರ ವೃತ್ತದಲ್ಲಿ ಆಗಿದ್ದ ಹಿಂಬಡ್ತಿ-ಮುಂಬಡ್ತಿ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ.
ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಅನ್ವಯ ಡಿವೈಎಸ್‌ಪಿ ಹುದ್ದೆಗೆ ಮುಂಬಡ್ತಿ ಹೊಂದಿದ್ದ 21 ಅಧಿಕಾರಿಗಳನ್ನು ಮತ್ತೆ ಇನ್‌ಸ್ಪೆಕ್ಟರ್ ಹುದ್ದೆಗೆ ಹಿಂಬಡ್ತಿಗೊಳಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಇದೇ ವೇಳೆ ಡಿವೈಎಸ್‌ಪಿಯಿಂದ ಇನ್‌ಸ್ಪೆಕ್ಟರ್ ಹುದ್ದೆಗೆ ಹಿಂಬಡ್ತಿಯಾಗಿದ್ದ 8 ಅಧಿಕಾರಿಗಳನ್ನು ಡಿವೈಎಸ್‌ಪಿ ಹುದ್ದೆಯಲ್ಲಿ ಮುಂದುವರೆಯಲು ಸೂಚಿಸಿದೆ.
ಈಗ ಡಿವೈಎಸ್‌ಪಿ ಇನ್‌ಸ್ಪೆಕ್ಟರ್ ಹುದ್ದೆಗೆ ಹಿಂಬಡ್ತಿಯಾಗಿರುವ 21 ಅಧಿಕಾರಿಗಳಿಗೆ ಮುಂಬಡ್ತಿ ಆಗುವ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ವಾಪಸ್ ನಿಯುಕ್ತಿಗೊಳಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಸುಪ್ರೀಂಕೋರ್ಟ್ ಎಸ್ಸಿ-ಎಸ್ಟಿ ಬಡ್ತಿ ಮೀಸಲಾತಿ ಕಾಯ್ದೆಯನ್ನು ರದ್ದುಗೊಳಿಸಿದ್ದರಿಂದ ಪೊಲೀಸ್ ಇಲಾಖೆ ಸಿದ್ಧಪಡಿಸಿದ್ದ ಜ್ಯೇಷ್ಠತಾ ಪಟ್ಟಿ ಅನ್ವಯ ಹಿಂಬಡ್ತಿ ಹಾಗೂ ಮುಂಬಡ್ತಿ ಆದೇಶ ಹೊರಡಿಸಿ ಜಾರಿಗೆ ತರಲಾಗಿತ್ತು.
ಅದೇ ರೀತಿ ಡಿವೈಎಸ್‌ಪಿ ಹುದ್ದೆಯಿಂದ ಹಿಂಬಡ್ತಿಯಾಗಿದ್ದ 8 ಅಧಿಕಾರಿಗಳುಅವರು ಈ ಮೊದಲು ಸೇವೆ ಸಲ್ಲಿಸುತ್ತಿದ್ದ ಸ್ಥಳದಲ್ಲೇ ಮುಂದುವರೆಯುವಂತೆ ನಿರ್ದೇಶಿಸಲಾಗಿದೆ. ಅಧಿಕಾರಿಗಳು ವರದಿ ಮಾಡಿಕೊಂಡ ಬಗ್ಗೆ ಪಾಲನಾ ವರದಿ ಸಲ್ಲಿಸುವಂತೆ ಡಿಜಿಪಿ ಆದೇಶಿಸಿದ್ದಾರೆ.












Click it and Unblock the Notifications