ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ; ಹೊಸ ಸುತ್ತೋಲೆ
ಬೆಂಗಳೂರು, ನವೆಂಬರ್ 12; ಕರ್ನಾಟಕದ ಪೊಲೀಸ್ ಇಲಾಖೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಕುರಿತು ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಎಲ್ಲಾ ಘಟಕಾಧಿಕಾರಿಗಳಿಗೆ ಈ ಕುರಿತು ಮಾಹಿತಿಯನ್ನು ನೀಡಲಾಗಿದೆ. ಕೆಎಸ್‌ಪಿ (ಡಿಪಿ) ನಿಯಮ 6 ರನ್ವಯ ಅಪಾದಿತ ಪೊಲೀಸ್ ಅಧಿಕಾರಿ (ಸಿಬ್ಬಂದಿಗಳ ವಿರುದ್ಧ ಕ್ರಮಬದ್ಧ ಇಲಾಖಾ ವಿಚಾರಣೆ ನಡೆಸುವ ಕುರಿತು ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.
ಡಿಜಿ & ಐಜಿಪಿ ಅವರಿಂದ ಅನುಮೋದಿಸಲ್ಪ ಸುತ್ತೋಲೆಯನ್ನು (ಸೌಮೇಂದು ಮುಖರ್ಜಿ, ಐಪಿಎಸ್) ಎಡಿಜಿಪಿ (ಆಡಳಿತ) ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್‌ರವರ ಪರವಾಗಿ ಹೊರಡಿಸಿದ್ದಾರೆ. ಕಛೇರಿಯ ಸುತ್ತೋಲೆ ದಿನಾಂಕ 15/04/2023, ಕರ್ನಾಟಕ ರಾಜ್ಯ (ಶಿಸ್ತು ನಡವಳಿಗಳು) ನಿಯಮಗಳು 1965/89ರ ಮತ್ತು ತಿದ್ದುಪಡಿ ಆದೇಶ ದಿನಾಂಕ 18/10/2022 ಅನ್ನು ಸುತ್ತೋಲೆ ಒಳಗೊಂಡಿದೆ.

ಸುತ್ತೋಲೆಯ ವಿವರಗಳು; ಆಪಾದಿತ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳ ವಿರುದ್ಧ ಕರ್ನಾಟಕ ಪೊಲೀಸ್ (ಶಿಸ್ತು ನಡವಳಿಗಳು) ನಿಯಮ 1965/ 89ರ ನಿಯಮ-6ರಡಿ ಶಿಸ್ತು ಕ್ರಮ ಜರುಗಿಸುವ ಪ್ರಕರಣಗಳಲ್ಲಿ ಪೊಲೀಸ್ ಮ್ಯಾನ್ಯುಯಲ್ ಆರ್ಡರ್ ಸಂಖ್ಯೆ: 437 ಅನ್ವಯ ದೋಷಾರೋಪಣೆ ಪತ್ರ ಹೊರಡಿಸಲು ಇಲಾಖಾ ವಿಚಾರಣಾಧಿಕಾರಿಯವರಿಗೆ ನಿರ್ದೇಶಿಸದೇ, ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳು 1965/89ರ ನಿಯಮ-6 ರನ್ವಯ ಶಿಸ್ತು ಪ್ರಾಧಿಕಾರಿಗಳೇ ಕೆಎಸ್‌ಪಿ (ಡಿಪಿ) ನಿಯಮ-6(2)ರಂತೆ ಆಪಾದಿತ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗೆ ದೋಷಾರೋಪಣೆ ಪತ್ರವನ್ನು ಹೊರಡಿಸಿ, ಶಿಸ್ತು ಕ್ರಮ ಜರುಗಿಸುವಂತೆ ಕ್ರಮ ಕೈಗೊಳ್ಳಲು ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ.
ಕೆಲವು ಪ್ರಕರಣಗಳಲ್ಲಿ ಆರೋಪಿತ ಪೊಲೀಸ್ ಅಧಿಕಾರಿಗಳು ಅವರ ವಿರುದ್ಧ ಆದೇಶಿಸಲಾದ ಇಲಾಖಾ ವಿಚಾರಣೆಯಲ್ಲಿ ದೋಷಾರೋಪಣಾ ಪತ್ರವನ್ನು ವಿಚಾರಣಾಧಿಕಾರಿಗಳು ಹೊರಡಿಸುತ್ತಿದ್ದು, ಆರೋಪಿತ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳ ಸಮಜಾಯಿಷಿ ಸ್ವೀಕೃತವಾದ ನಂತರ ಕ್ರಮಬದ್ಧ ಇಲಾಖಾ ವಿಚಾರಣೆಯನ್ನು ಮುಂದುವರೆಸಲಾಗುತ್ತಿರುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತಿದೆ.
ಆರೋಪಿತ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳು ಸಲ್ಲಿಸಿರುವ ಸಮಜಾಯಿಷಿಯನ್ನು ದಾಖಲೆಗಳೊಂದಿಗೆ ಪರಿಶೀಲಿಸಿ ಕ್ರಮಬದ್ಧ ಇಲಾಖಾ ವಿಚಾರಣೆ ಮುಂದುವರೆಸುವ ಬಗ್ಗೆ ಅಥವಾ ಮುಂದುವರೆಸದೇ ಇರುವ ಬಗ್ಗೆ ಶಿಸ್ತು ಪ್ರಾಧಿಕಾರಿಗಳು ತೀರ್ಮಾನ ತೆಗೆದುಕೊಳ್ಳುವಬಹುದಾಗಿತ್ತು. ಈ ಹಂತದಲ್ಲಿ ಆರೋಪಿತ ಅಧಿಕಾರಿಗಳು ಅವಕಾಶ ವಂಚಿತರಾಗುತ್ತಿರುವ ಬಗ್ಗೆ ಮತ್ತು ನೈಸರ್ಗಿಕ ನ್ಯಾಯ ಉಲ್ಲಂಘನೆ ಆಗುತ್ತಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿರುತ್ತಾರೆ. ಈ ಬಗ್ಗೆ ನ್ಯಾಯಾಲಯವು ಸಹ ಪರಿಗಣಿಸಿರುತ್ತದೆ ಎಂದು ಸುತ್ತೋಲೆ ಹೇಳಿದೆ.
ಕರ್ನಾಟಕ ರಾಜ್ಯ (ಶಿಸ್ತು ನಡವಳಿಗಳು) 1965/89ರ ನಿಯಮ-6ರಲ್ಲಿ ಜರುಗಿಸುವ ಶಿಸ್ತುಕ್ರಮದ ಬಗ್ಗೆ ಪ್ರಕ್ರಿಯೆಗಳನ್ನು ವಿವರಿಸಲಾಗಿರುತ್ತದೆ. ಅದರಲ್ಲಿ ನಿಯಮ-6(2)(3)(4)ರಲ್ಲಿ ಪ್ರಥಮವಾಗಿ ಶಿಸ್ತುಪ್ರಾಧಿಕಾರಿಗಳು ಅಥವಾ ವಿಶೇಷ ಪ್ರಾಧಿಕಾರ ಹೊಂದಿದ ಅಧಿಕಾರಿಗಳು ನಿರ್ಧಿಷ್ಟವಾಗಿ ಆರೋಪ ಪಟ್ಟಿಯನ್ನು ಸಿದ್ಧಪಡಿಸಿ ಆರೋಪಿತ ಪೊಲೀಸ್ ಅಧಿಕಾರಿಗಳಿಗೆ ಆಯಾ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು (ವಿಚಾರಣೆಗೊಳಪಡಿಸಬಹುದಾದ ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳು) ಒದಗಿಸುವುದು ಮತ್ತು ದಾಖಲಾತಿಗಳನ್ನು ಪರಿಶೀಲಿಸುವ ಅವಕಾಶವನ್ನು ನೀಡಿ ದೋಷಾರೋಪಣಾ ಪತ್ರವನ್ನು ನೀಡಬೇಕಾಗಿರುತ್ತದೆ.
ನಂತರದಲ್ಲಿ ಆರೋಪಿತ ಅಧಿಕಾರಿಗಳಿಂದ ರಕ್ಷಣಾ ಹೇಳಿಕೆ/ ಸಮಜಾಯಿಷಿಯನ್ನು ಪಡೆದ ನಂತರ ಆರೋಪವನ್ನು ಅಲ್ಲಗೆಳೆದಿರುವ ಬಗ್ಗೆ ಪರಿಶೀಲಿಸಬೇಕಾಗಿರುತ್ತದೆ ನಿಯಮ-6(4), ಶಿಸ್ತು ಪ್ರಾಧಿಕಾರಿಗಳು ಈ ಹಂತದಲ್ಲಿ ಅಲ್ಲಗೆಳೆದಿರುವ ಆರೋಪಗಳ ಸಂಬಂಧ ಕ್ರಮಬದ್ಧ ಇಲಾಖಾ ವಿಚಾರಣೆ ಆದೇಶಿಸುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದಾಗಿರುತ್ತದೆ.
ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸೂಕ್ತ/ ಸಮರ್ಥ ಪೊಲೀಸ್ ಅಧಿಕಾರಿ/ ನಿವೃತ್ತ ನ್ಯಾಯಾಧೀಶರು (ಸರ್ಕಾರದಿಂದ ನಾಮ ನಿರ್ದೇಶಿತರಾದವರು) ರವರನ್ನು ಕ್ರಮಬದ್ಧ ಇಲಾಖಾ ವಿಚಾರಣೆ ನಡೆಸುವ ಸಂಬಂಧ ವಿಚಾರಣಾಧಿಕಾರಿಯಾಗಿ ನೇಮಿಸತಕ್ಕದ್ದು. ಆದುದರಿಂದ, ರಾಜ್ಯದಲ್ಲಿನ ಎಲ್ಲಾ ಘಟಕಾಧಿಕಾರಿಗಳು/ ಶಿಸ್ತುಪ್ರಾಧಿಕಾರಿಗಳು ಕರ್ನಾಟಕ ರಾಜ್ಯ (ಶಿಸ್ತು ನಡವಳಿಗಳು) 1965/89ರ ಮತ್ತು ತಿದ್ದುಪಡಿ ಆದೇಶ ನಿಯಮ-6ರಡಿಯಲ್ಲಿ ಸ್ಪಷ್ಟಪಡಿಸಿರುವಂತೆ ಪ್ರಕ್ರಿಯೆಗಳನ್ನು ಕಟ್ಟಿನಿಟ್ಟಾಗಿ ಪಾಲಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.












Click it and Unblock the Notifications