ದೆಹಲಿ ಚುನಾವಣಾ ಫಲಿತಾಂಶ: 'ಕರ್ನಾಟಕ, ತೆಲಂಗಾಣದ ಚುನಾವಣೆಗೆ ದಿಕ್ಸೂಚಿ'
ಬೆಂಗಳೂರು, ಫೆಬ್ರವರಿ 08: ದೆಹಲಿ ಚುನಾವಣಾ ಫಲಿತಾಂಶವು ಮುಂದಿನ ಕರ್ನಾಟಕ, ತೆಲಂಗಾಣದ ಚುನಾವಣೆಗೆ ದಾರಿದೀಪ. ಇದು ದೇಶಕ್ಕೆ ಸಿಕ್ಕಿದ ಗೆಲುವು. ಡಿಕೆ ಶಿವಕುಮಾರ್ ಗ್ಯಾರೆಂಟಿ ದೆಹಲಿಯಲ್ಲಿ ಠುಸ್ ಪಟಾಕಿ ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದರು. ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಟ್ಟು ಅಭಿವೃದ್ಧಿ ಇಲ್ಲವಾಗಿದೆ. ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಇದೇ ಕೇಜ್ರಿವಾಲ್ 25 ಉಚಿತಗಳನ್ನು ನೀಡಿದ್ದರು. ಅವರ ಸ್ಥಿತಿ ಏನಾಗಿದೆ? ಎಂದು ಪ್ರಶ್ನಿಸಿದರು. ಇದು ದೇಶಕ್ಕೆ ದಿಕ್ಸೂಚಿ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಪ್ರಬುದ್ಧ ಮತದಾರರು ದೆಹಲಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಲು ಮತದಾರರು ಮತ್ತೊಮ್ಮೆ ನಮಗೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿ ಪರ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆಯ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ದೆಹಲಿ ರಾಜ್ಯದಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದೆಹಲಿಯ ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅವರು, ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರ ಮುಖವಾಡ ಕಳಚಿಬಿದ್ದಿದೆ ಎಂದು ನುಡಿದರು. ಕೇಜ್ರಿವಾಲ್ ಅವರೂ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಆತಿಶಿ, ಮನೀಷ್ ಸಿಸೋಡಿಯ ಅವರೂ ಸೋಲುತ್ತಿದ್ದಾರೆ. ಲಿಕ್ಕರ್ ಗೇಟ್, ಶೀಷ್ ಮಹಲ್ ಹಗರಣದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಪ್ ಬಣ್ಣ ಬಯಲಾಗಿದೆ. ದೆಹಲಿ ಮತದಾರರು, ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲೂ ಅದು ಶೂನ್ಯ ಸಂಪಾದನೆ ಮಾಡಿತ್ತು ಎಂದ ಅವರು, ಹರಿಯಾಣ, ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ಸಿಗೆ ಮುಖಭಂಗ ಆಗಿತ್ತು. ಗ್ಯಾರೆಂಟಿಗಳೆಲ್ಲ ತಾತ್ಕಾಲಿಕ ಎಂದರು. ತಾತ್ಕಾಲಿಕ ಗ್ಯಾರೆಂಟಿಗಿಂತ ದೃಢ ನಾಯಕತ್ವ ಕೊಡುವ ನರೇಂದ್ರ ಮೋದಿಜೀ ನೇತೃತ್ವದ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ದೆಹಲಿ ಮತದಾರರು ಮತ್ತೊಮ್ಮೆ ರುಜುವಾತು ಮಾಡಿದ್ದಾರೆ ಎಂದು ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಅರವಿಂದ ಕೇಜ್ರಿವಾಲ್ ಅವರ ದೆಹಲಿ ಸರಕಾರ ಭ್ರಷ್ಟಾಚಾರಕ್ಕೆ ಬಲಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿಚಾರದಲ್ಲಿ ಒಂದೇ ಒಂದು ಆಪಾದನೆಯನ್ನೂ ಹೊತ್ತಿಲ್ಲ. ಕರ್ನಾಟಕದಲ್ಲಿ ನಮ್ಮ ವಿರುದ್ಧ ಶೇ 40 ಕಮಿಷನ್, ಪೇ ಸಿಎಂ ಮತ್ತಿತರ ಆರೋಪ ಮಾಡಿ ಚುನಾವಣಾ ತಂತ್ರ ಹೆಣೆದಿದ್ದ ಕಾಂಗ್ರೆಸ್ಸಿನದು ದೆಹಲಿಯಲ್ಲಿ ಶೂನ್ಯ ಸಂಪಾದನೆ ಎಂದು ಟೀಕಿಸಿದರು. ಈಗ ಅವರು ಖಾತೆ ತೆರೆದಿಲ್ಲ. ಆದರೆ ಕ್ಯಾತೆ ತೆಗೆಯುವುದನ್ನು ಅವರು ಬಿಡುವುದಿಲ್ಲ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ, ಕೇಜ್ರಿವಾಲ್ ಪ್ರಾಮಾಣಿಕ ಅಲ್ಲ. ಭ್ರಷ್ಟ ಎಂಬುದು ಜನರಿಗೆ ಮನವರಿಕೆ ಆಗಿದೆ. ಸುಳ್ಳಿನ ಮುಖವಾಡ ಕಳಚಿಬಿದ್ದಿದೆ ಎಂದು ತಿಳಿಸಿದರು. ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಬೇಕಿದೆ. ಕೇವಲ ನಕಾರಾತ್ಮಕ ಪ್ರಚಾರದಿಂದ ಚುನಾವಣೆ ಗೆಲ್ಲಲು ಅಸಾಧ್ಯ ಎಂದು ತಿಳಿಸಿದರು. ಅಂಬೇಡ್ಕರರ ಸಂವಿಧಾನ, ಜನತೆಯ ಸಂವಿಧಾನ ಗೆದ್ದಿದೆ ಎಂದು ತಿಳಿಸಿದರು.












Click it and Unblock the Notifications