Congress: ಮುಂಬರುವ ಚುನಾವಣೆಗಳಿಗೆ ಸ್ಪೆಷಲ್ ಟಾರ್ಗೆಟ್ ಕೊಟ್ಟ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷದ ಯುವ ನಾಯಕರಿಗೆ ವಿಶೇಷ ಟಾಸ್ಕ್ ನೀಡಿದ್ದಾರೆ. ನಿನ್ನೆಯಷ್ಟೇ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ನಡೆದಿದ್ದು, ಅಧಿಕಾರ ಸ್ವೀಕರಿಸಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೇರಿ ಎಲ್ಲ ಯುವ ನಾಯಕರಿಗೆ ಡಿಕೆ ಶಿವಕುಮಾರ್ ವಿಶೇಷ ಹಾಗೂ ಖಡಕ್ ಸೂಚನೆಗಳನ್ನು ಕೊಟ್ಟಿದ್ದಾರೆ. ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವ ನೀವು ಈ ಕೆಲಸವನ್ನು ತಪ್ಪದೇ ಮಾಡಲೇಬೇಕು ಎಂದು ಎಚ್ಚರಿಕೆಯೂ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಮಂಜುನಾಥ್ ಗೌಡ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಡಿಕೆಶಿ ಮಾತನಾಡಿದ್ದಾರೆ.
ಯುವ ಕಾಂಗ್ರೆಸ್ ನಾಯಕರಾಗಿ ಬೂತ್ ಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುವುದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವವನು ಮಾತ್ರ ನಿಜವಾದ ನಾಯಕ ಎನಿಸಿಕೊಳ್ಳುತ್ತಾನೆ. ಇಲ್ಲಿ ಚುನಾವಣೆಯಲ್ಲಿ ಗೆದ್ದಿರುವವರಷ್ಟೇ ನಮ್ಮ ಪಾಲಿನ ನಾಯಕರಲ್ಲ. ನಿಮ್ಮ ಪರವಾಗಿ ಕೆಲಸ ಮಾಡಿ ನಿಮ್ಮನ್ನು ಗೆಲ್ಲಿಸಿರುವ ಕಾರ್ಯಕರ್ತರು ನಮ್ಮ ನಿಜವಾದ ನಾಯಕರು. ಅವೆರೆಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ನಿಮ್ಮ ಚುನಾವಣೆ ಮುಗಿದಿದೆ. ಇದು ಆಂತರಿಕ ಚುನಾವಣೆಯಷ್ಟೇ ಎಂದು ಕಿವಿಮಾತು ಹೇಳಿದ್ದಾರೆ.

ನಿಮ್ಮ ನಿಜವಾದ ಹೋರಾಟ ಏನೇ ಇದ್ದರೂ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳಲ್ಲಿ ತೋರಿಸಬೇಕು. 2028ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಹೋರಾಟ ಮಾಡಬೇಕು. ಕರ್ನಾಟಕ ರಾಜ್ಯದಲ್ಲಿ 25 ಲಕ್ಷ ಯುವ ಕಾಂಗ್ರೆಸ್ ಸದಸ್ಯತ್ವ ಮಾಡಲಾಗಿದೆ ಎಂಬ ವರದಿ ಬಂದಿದೆ. ಆದರೆ ಇಲ್ಲಿ ನೋಡಿದರೆ 20 ಸಾವಿರ ಸದಸ್ಯರಷ್ಟೇ ಕಾಣಿಸುತ್ತಿದ್ದೀರಿ. ಉಳಿದ ಸದಸ್ಯರು ಎಲ್ಲಿ ಹೋದರು ಎಂದು ಕೇಳಲು ಬಯಸುತ್ತೇನೆ ಎಂದು ವೇದಿಕೆಯಲ್ಲೇ ಯುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಲೂಕು ಮಟ್ಟದ ಅಧ್ಯಕ್ಷರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇಂತದ್ದೇ ಪದಗ್ರಹಣ ಕಾರ್ಯಕ್ರಮಗಳನ್ನು ಮಾಡಬೇಕು. ಆ ಕಾರ್ಯಕ್ರಮಕ್ಕೆ ಆ ತಾಲ್ಲೂಕಿನ ಯುವ ಕಾಂಗ್ರೆಸ್ ಸದಸ್ಯರನ್ನು ಆಹ್ವಾನಿಸಬೇಕು. ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸದಸ್ಯತ್ವ ಪಡೆದವರಿಂದ ಮತ ಹಾಕಿಸಿಕೊಂಡು ನಂತರ ಅವರನ್ನು ಬಿಡುವುದಲ್ಲ. ಸದಸ್ಯತ್ವ ಪಡೆದವರು ಕಾಂಗ್ರೆಸ್ ಪಕ್ಷದ ಲೆಕ್ಕದಲ್ಲಿರಬೇಕು. ಆಗ ಯಾರೆಲ್ಲ ನಿಜವಾದ ಸದಸ್ಯರು ಎಂಬುದು ತಿಳಿಯುತ್ತದೆ ಎಂದು ಯುವನಾಯಕರಿಗೆ ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಯುವ ಕಾಂಗ್ರೆಸ್ ಇತಿಹಾಸದಲ್ಲೇ ಇದೊಂದು ಮಹತ್ವದ ಘಳಿಗೆ ಎಂದು ಹೇಳಲು ಬಯಸುತ್ತೇನೆ. ಯುವ ಕಾಂಗ್ರೆಸ್‌ಗೆ 25 ಲಕ್ಷ ಸದಸ್ಯರನ್ನ ನೋಂದಣಿ ಮಾಡಲಾಗಿದ್ದು, ಯುವ ಕಾಂಗ್ರೆಸ್ ಘಟಕವು ಪ್ರಬಲ ರಾಜಕೀಯ ಸಂಘಟನೆಯಾಗಿ ಹೊರಹೊಮ್ಮಿದೆ. ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಐತಿಹಾಸಿಕ ಕಾರ್ಯಕ್ರಮವನ್ನು ನಡೆಸಿದ್ದೇವೆ. ಇದೀಗ ಯುವ ಕಾಂಗ್ರೆಸ್‌ನ ಬೃಹತ್ ಕಾರ್ಯಕ್ರಮ ನಡೆಯುತ್ತಿದೆ. ತಾಲ್ಲೂಕು ಮಟ್ಟದಲ್ಲೂ ಕೂಡ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇದೇ ರೀತಿ ಆಯೋಜಿಸಬೇಕು ಎಂದು ಕರೆ ನೀಡಿದ್ದಾರೆ.












Click it and Unblock the Notifications